ಎಕರೆಗೆ 34 ಕ್ವಿಂಟಲ್ ಮೆಕ್ಕೆಜೋಳ ಬೆಳೆದ ರೈತನ ಸಾಧನೆ
ಮಹಾಲಿಂಗಪುರ 14 : ನೀರಿನ ಅಭಾವ, ಕೃಷಿ ವೆಚ್ಚದ ಏರಿಕೆ ಹಾಗೂ ಹವಾಮಾನದ ಅನಿಶ್ಚಿತತೆಗಳ ನಡುವೆಯೂ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಪ್ರಗತಿಪರ ರೈತ ಶಿವಲಿಂಗಪ್ಪ ಜೈನಾಪುರ ಸಾಬೀತುಪಡಿಸಿದ್ದಾರೆ. ಬೆಳಗಲಿ ಪಟ್ಟಣದ ಮಿರ್ಜಿ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿ ಕೇವಲ ಒಂದು ಎಕರೆಗೆ 34 ಕ್ವಿಂಟಲ್ ಮೆಕ್ಕೆಜೋಳ ಬೆಳೆದು ಗಮನ ಸೆಳೆದಿದ್ದಾರೆ. ಇವರ ಕೃಷಿ ಸಾಧನೆಯ ಹಿನ್ನೆಲೆಯಲ್ಲಿ ಅಡ್ವಾಂಟಾ ಕಂಪನಿಯ ಪಿಎಸಿ 741 ಮೆಕ್ಕೆಜೋಳ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಅಡ್ವಾಂಟಾ ಬೀಜ ಕಂಪನಿಯ ಜಿಲ್ಲಾ ಮಾರಾಟ ಪ್ರತಿನಿಧಿ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಪಿಎಸಿ 741 ಮೆಕ್ಕೆಜೋಳ ತಳಿಯು ಉದ್ದನೆಯ ತೆನೆ ಹಾಗೂ ದಪ್ಪ ಕಾಳುಗಳನ್ನು ಹೊಂದಿದ್ದು, ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಕಡಿಮೆ ನೀರಿನ ಲಭ್ಯತೆಯಲ್ಲಿಯೂ ಸೂಕ್ತ ಕೃಷಿ ನಿರ್ವಹಣೆಯೊಂದಿಗೆ ಉತ್ತಮ ಬೆಳವಣಿಗೆ ಸಾಧಿಸಲು ಈ ತಳಿ ಸಹಕಾರಿಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲು ಸುಮಾರು 7 ಕೆ.ಜಿ. ಬೀಜ ಅಗತ್ಯವಿದೆ ಎಂದು ತಿಳಿಸಿದರು. ಕಂಪನಿಯ ಬೀಜಗಳನ್ನು ಬಳಸುವ ರೈತರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಉತ್ತಮ ಕೃಷಿ ಸಾಧನೆ ಮಾಡಿದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಧೋಳ ಮತ್ತು ಜಮಖಂಡಿ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 10 ಬಿತ್ತನೆ ಯಂತ್ರಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಕರ್ತ ರಾಘವೇಂದ್ರ ನೀಲಣ್ಣವರ ಮಾತನಾಡಿ, ರೈತರು ವಾಣಿಜ್ಯ ಬೆಳೆಗಳೊಂದಿಗೆ ಆಹಾರ ಧಾನ್ಯಗಳ ಉತ್ಪಾದನೆಗೂ ಆದ್ಯತೆ ನೀಡಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಸರ್ಕಾರ ಸೂಕ್ತ ಬೆಲೆ ನಿಗದಿಪಡಿಸುವುದರ ಜೊತೆಗೆ ಕೃಷಿಗೆ ಅಗತ್ಯವಾದ ನೀರು ಮತ್ತು ವಿದ್ಯುತ್ನ್ನು ಸಮರ್ಕವಾಗಿ ಪೂರೈಸಬೇಕು. ಬೀಜ ಕಂಪನಿಗಳು ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸುವುದರ ಜತೆಗೆ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಸಹಕಾರ ನೀಡುವ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರೈತರಾದ ಭೀಮಪ್ಪ ಪಾಟೀಲ, ಬುಜಬುಲಿ ಆಲಗೂರ, ಜ್ಯೋತೆಪ್ಪ ಕಡಪಟ್ಟಿ, ಮಹಾಲಿಂಗಪ್ಪ ಲಾಗದವರ, ಸಿಂಗಾಡೆಪ್ಪ ಹೊಸೂರ, ಸಂಗಪ್ಪ ರಾಮದುರ್ಗ, ಮಹಾದೇವ ದೊಡಹಟ್ಟಿ, ಬಸವರಾಜ ಹಿಪ್ಪರಗಿ, ರಾಮಪ್ಪ ಪಾಟೀಲ, ಗಿರಮಲ್ಲಪ್ಪ ಭದ್ರಶೆಟ್ಟಿ, ಧರೆಪ್ಪ ಹಿಪ್ಪರಗಿ ಹಾಗೂ ಪರಮಾನಂದ ಬಾಡಗಿ ಉಪಸ್ಥಿತರಿದ್ದರು.
ರಸಗೊಬ್ಬರ ವಿತರಕರಾದ ಈಶ್ವರ ಒಂಟಗೋಡಿ, ದುಂಡಪ್ಪ ಒಡೆಯರ, ಶ್ರೀಶೈಲ ಲಾತೂರ, ನಾಗರಾಳ ಸೇರಿದಂತೆ ಸ್ಥಳೀಯ ರೈತ ಬಾಂಧವರು ಭಾಗವಹಿಸಿದ್ದರು.