ವಿದ್ಯಾರ್ಥಿಗಳು ಆಧುನಿಕ ಜ್ಞಾನ ಮೈಗೂಡಿಸಿಕೊಳ್ಳಬೇಕು: ಡಾ. ದೇವಿಕಾರಾಣಿ ಭಾತೆ
ಚಿಕ್ಕೋಡಿ 14 : ಅರೆವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಳ್ಳುವುದರ ಜತೆಗೆ ರೋಗಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಆಧುನಿಕ ವೈದ್ಯಕೀಯ ಜ್ಞಾನವನ್ನು ನಿರಂತರವಾಗಿ ಮೈಗೂಡಿಸಿಕೊಳ್ಳಬೇಕು ಎಂದು ಚಿಕ್ಕೋಡಿಯ ಭಾತೆ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ದೇವಿಕಾರಾಣಿ ಆರ್. ಭಾತೆ ಹೇಳಿದರು.ಇಲ್ಲಿನ ಜಿ.ಎಸ್.ಇ. ಸಂಸ್ಥೆಯ ಜೆ.ಆರಿ್ಡ. ಭಾತೆ ಅರೆವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ 2025-26ನೇ ಸಾಲಿನ ಡಿ.ಎಂ.ಎಲ್.ಟಿ. ಹಾಗೂ ಡಿ.ಒ.ಟಿ. ಮತ್ತು ಎ.ಟಿ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅರೆವೈದ್ಯಕೀಯ ಕ್ಷೇತ್ರವು ಆರೋಗ್ಯ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಕ್ಷೇತ್ರದಲ್ಲಿ ವೃತ್ತಿಪರ ಕೌಶಲ, ಸೇವಾ ಮನೋಭಾವ, ಶಿಸ್ತು ಮತ್ತು ಪ್ರಾಮಾಣಿಕತೆ ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ನಿರಂತರ ಅಧ್ಯಯನಕ್ಕೆ ಆದ್ಯತೆ ನೀಡುವ ಮೂಲಕ ಹೊಸ ತಂತ್ರಜ್ಞಾನ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳ ಕುರಿತು ಜ್ಞಾನ ಬೆಳೆಸಿಕೊಳ್ಳಬೇಕು. ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದರೊಂದಿಗೆ ವೃತ್ತಿಯ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಸೇವೆಯನ್ನು ಕೇವಲ ವೃತ್ತಿಯನ್ನಾಗಿ ಪರಿಗಣಿಸದೆ, ಅದನ್ನು ಸಾಮಾಜಿಕ ಸೇವೆಯ ಅವಕಾಶವೆಂದು ಭಾವಿಸಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಅಂತಿಮ ವರ್ಷದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.ಕಾಲೇಜಿನ ಪ್ರಾಂಶುಪಾಲ ಆರ್.ಆರ್. ಪಿಡಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ವೃತ್ತಿಪರ ಬೆಳವಣಿಗೆಯಲ್ಲಿ ಸಂಸ್ಥೆಯ ಪಾತ್ರವನ್ನು ವಿವರಿಸಿದರು. ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಉದಯಕುಮಾರ ದಾನವಾಡೆ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ಎಸ್.ಎಸ್. ಕೊನ್ನೂರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಡಾ. ಮಿಲನ ಕಾಂಬಳೆ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.ವಿದ್ಯಾರ್ಥಿನಿಯರಾದ ಸುಷ್ಮಾ ಹಾಗೂ ಸಹನಾ ಕಾರ್ಯಕ್ರಮ ನಿರೂಪಿಸಿದರು. ಆರಿ್ಪ. ಮಾಳಗೆ ವಂದಿಸಿದರು. ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..