ಧಾರವಾಡ - ಹುಬ್ಬಳ್ಳಿ

ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಲಿ : ಡಾ. ಅಜಿತ ಪ್ರಸಾದ

ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಲಿ : ಡಾ. ಅಜಿತ ಪ್ರಸಾದ

ಧಾರವಾಡ 14 : ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣ ಸಂಸ್ಥೆಗಳ ಮುಖ್ಯ ಧ್ಯೇಯವಾಗಬೇಕು. ಪಠ್ಯ ಶಿಕ್ಷಣದ ಜೊತೆಗೆ ಆಧುನಿಕ ತಂತ್ರಜ್ಞಾನ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯ ಎಂದು ಜೆ.ಎಸ್‌.ಎಸ್‌. ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. 

ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಸಂಸ್ಥೆಗೆ 2026ಹಿ27ನೇ ಸಾಲಿಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ದೀಕ್ಷಾ ಬೋಧ ಸಮಾರಂಭ ಹಾಗೂ ಎರಡು ದಿನಗಳ ಓರಿಯೆಂಟೇಶನ್ ಕಾರ್ಯಕ್ರಮದ ಉದ್ಘಾಟನೆ ಮತ್ತು ತರಬೇತಿ ಪೂರ್ಣಗೊಳಿಸಿದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ (ಎಐ), ಮಷಿನ್ ಲನಿಂರ್ಗ್, ಕ್ಲೌಡ್ ಕಂಪ್ಯೂಟಿಂಗ್‌. ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ಪಡೆಯುವುದು ಅಗತ್ಯವಾಗಿದೆ. 

           ವಿದ್ಯಾರ್ಥಿಗಳು ಕೇವಲ ಪಠ್ಯಜ್ಞಾನಕ್ಕೆ ಸೀಮಿತವಾಗದೆ, ನಿರಂತರ ಕಲಿಕೆ, ಪರಿಶ್ರಮ, ಶಿಸ್ತು ಮತ್ತು ದೃಢಸಂಕಲ್ಪವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ವ್ಯಕ್ತಿತ್ವ, ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಮೂಲಕ ಜೀವನದಲ್ಲಿ ಉನ್ನತ ಗುರಿಗಳನ್ನು ತಲುಪಬೇಕು ಎಂದು ಸಲಹೆ ನೀಡಿದರು. 

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಪ್ರಗತಿಗಾಗಿ ಸಂಸ್ಥೆಯಲ್ಲಿ ವಿವಿಧ ಕಾರ್ಯಾಗಾರಗಳು, ಕೌಶಲ್ಯಾಭಿವೃದ್ಧಿ ತರಬೇತಿಗಳು, ಉದ್ಯೋಗಪೂರ್ವ ತರಬೇತಿ ಕಾರ್ಯಕ್ರಮಗಳು ಹಾಗೂ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಇವುಗಳ ಪರಿಣಾಮವಾಗಿ ಎಂ.ಸಿ.ಎ. ವಿಭಾಗವು ಶೇಕಡಾ 100ರಷ್ಟು ಫಲಿತಾಂಶ ಸಾಧಿಸಲು ನೆರವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದರ ಜೊತೆಗೆ ಅವರ ಭವಿಷ್ಯದ ವೃತ್ತಿಜೀವನಕ್ಕೆ ಭದ್ರ ಬುನಾದಿಯಾಗಲಿವೆ ಎಂದರು. ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ ನೀಡಿ ಮಹಾವಿದ್ಯಾಲಯಕ್ಕೆ ಸ್ವಾಗತಿಸಿ ಶುಭಕೋರಲಾಯಿತು. . ಮಂಜುಳಾ ಕಲ್ಮಠ ಗಣ್ಯರನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಪೂರ್ವ ದೇಶಪಾಂಡೆ ನಿರೂಪಿಸಿದರು. ಪ್ರೊ. ಬಾಹುಬಲಿ ಚಿವಟೆ ವಂದಿಸಿದರು. ಡಾ. ಬಸವರಾಜ ಜಿ., ನಾಗರಾಜ ಗೌಡರ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು 


ಸುದ್ದಿ ಓದಿ