ಮಹಿಳೆಯರು ಕನ್ನಡ ಸಾಹಿತ್ಯ ಕೃಷಿಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲಿ: ಪ್ರೊ. ಮಾಲತಿ ಪಟ್ಟಣಶೆಟ್ಟಿ
ಧಾರವಾಡ 14: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದುವರೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಆದರೂ ಕಾವ್ಯ, ಕಥೆ, ಇತರೆ ಸಾಹಿತ್ಯದ ಪ್ರಕಾರಗಳಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ, ಸಾಹಿತ್ಯ ಕೃಷಿ ಮಾಡಬೇಕು. ಮಹಿಳೆಯರು ಇನ್ನೂ ಹೆಚ್ಚೆಚ್ಚು ಓದಿನ ಕಡೆಗೆ ಗಮನಹರಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ ದತ್ತಿ ಅಂಗವಾಗಿ ದಿನಾಂಕ: 12-10-2026 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬೆಳಗಾವಿಯ ನೀಲಗಂಗಾ ಚರಂತಿಮಠ ಅವರಿಗೆ 2026 ನೇ ಸಾಲಿನ ‘ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿದರು. ಇದು ಪ್ರಶಸ್ತಿಗಳ ಯುಗ. ನೀಲಗಂಗಾ ಚರಂತಿಮಠ ಅವರಿಗೆ ಈ ಸಾಹಿತ್ಯ ಪುರಸ್ಕಾರ ದೊರಕಿದ್ದು ಸಂತಸ ತಂದಿದೆ. ಹದಿಹರೆಯದವರು ಇಂತಹ ಪ್ರಶಸ್ತಿಗಳಿಗೆ ಭಾಜನರಾಗಬೇಕು. ಇದರ ಕೊರತೆ ಎದ್ದು ಕಾಣುತ್ತಿದೆ. ಪ್ರಶಸ್ತಿ ಕೊಡುವ ಸಂಸ್ಥೆಗಳು ನ್ಯಾಯಬದ್ಧವಾಗಿ ಕಥೆಯಲ್ಲಿನ ಮೌಲಿಕತೆ, ಗುಣವನ್ನು ಕಟ್ಟಿಕೊಡುವಲ್ಲಿ ಆಸ್ಥೆ ತೋರಿಸುತ್ತಿವೆ. ಪ್ರಶಸ್ತಿಗೆ ಬೆನ್ನು ಹತ್ತುವ ಮನೋಧರ್ಮ ಯಾವ ಬರಹಗಾರರಲ್ಲಿ ಇರಬಾರದು. ಪರಿಪೂರ್ಣತೆಯತ್ತ ಗಮನ ಹರಿಸಬೇಕು. ಇನ್ನೂ ಹೆಚ್ಚಿನ ಕೆಲಸ ಮಾಡುವ ಉತ್ಕಟ ಆಶಯ ಹೊಂದಿರಬೇಕು. ಮುಪ್ಪು ದೇಹಕ್ಕೆ ಬರುತ್ತದೆ. ಆದರೆ ಮನಸ್ಸಿಗೆ ಅಲ್ಲ. ಗುಣಾತ್ಮಕವಾದ ಮೌಲಿಕ ಕೃತಿಗಳು ಹೊರ ಬರಲಿ ಎಂದು ಪ್ರೊ. ಮಾಲತಿ ಪಟ್ಟಣಶೆಟ್ಟಿ ಆಶಯವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀಲಗಂಗಾ ಚರಂತಿಮಠ ಅವರು, ನಾನು ಸಾಕಷ್ಟು ಶಿಷ್ಟ ಸಾಹಿತ್ಯ ರಚಿಸಿದ್ದೇನೆ. ಇದಕ್ಕೆ ಕನ್ನಡದ ದಿಗ್ಗಜ ಡಾ. ಪಾಟೀಲ ಪುಟ್ಟಪ್ಪನವರು ಸದಾ ಪ್ರೇರಣೆ, ಪ್ರೋತ್ಸಾಹ ತುಂಬುತ್ತಿದ್ದರು. ನಾವು ಅವರ ವಾರಸ್ಸುದಾರರು ನಮ್ಮೆಲ್ಲರ ಮೇಲೆ ಕನ್ನಡ ಕಟ್ಟುವ, ಬೆಳೆಸುವ ದೊಡ್ಡ ಜವಾಬ್ದಾರಿ ಇದೆ. ಈ ದಿಶೆಯಲ್ಲಿ ನಾವೆಲ್ಲರೂ ಇನ್ನೂ ಹೆಚ್ಚೆಚ್ಚು ಕನ್ನಡದ ಕೆಲಸವನ್ನು ಮಾಡಬೇಕಾಗಿದೆ ಎಂದು ಸಂಘದ ಕಾರ್ಯ ಯೋಜನೆಗಳನ್ನು ಶ್ಲಾಘಿಸಿ, ಪಾಪುರವರ ವ್ಯಕ್ತಿತ್ವ, ಅವರೊಂದಿಗಿನ ಒಡನಾಟವನ್ನು ನೆನೆದು ಭಾವುಕರಾದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ನೀಲಗಂಗಾ ಚರಂತಿಮಠ ಅವರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಇವರಿಗೆ ‘ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ’ ದೊರೆತಿರುವದು ಶ್ಲಾಘನೀಯ. ನಾನು ಡಾ. ಪಾಪು ಅವರ ಒಡನಾಟದಲ್ಲಿದ್ದೆ. ಪಾಪು ದೈತ್ಯ ಪ್ರತಿಭೆಯ, ಮಹಾಚೇತನ, 53 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸಂಘವನ್ನು ಸಮರ್ಥವಾಗಿ ಮುನ್ನಡೆಸಿ ಸಾಕಷ್ಟು ಬೆಳೆಸಿದರು. ರಾ.ಹ.ದೇಶಪಾಂಡೆಯವರ ಕನಸು ನನಸು ಮಾಡಿದವರು ಎಂದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶ್ರೀಮತಿ ವಿಶ್ವೇಶ್ವರಿ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಅಮೃತ ಚರಂತಿಮಠ, ಅರುಂಧತಿ ಸವದತ್ತಿ, ಜಯಾ ಅಂಗಡಿ, ಚಂದ್ರಶೇಖರ ಅಮೀನಗಡ, ವಿಶ್ವನಾಥ ಗುಗ್ಗರಿ ಸೇರಿದಂತೆ ಅನೇಕರು ಇದ್ದರು.