ನಿರ್ಮಲ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ; ಮಾನಸಿಕ ಆರೋಗ್ಯ ಮತ್ತು ಕಾನೂನು ಜಾಗೃತಿ ಶಿಬಿರ
ಕಾಗವಾಡ 14 : ಇಂದಿನ ಆಧುನಿಕ ಮತ್ತು ಒತ್ತಡದ ಜೀವನ ಶೈಲಿಯಿಂದಾಗಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೈನಂದಿನ ಜೀವನದಲ್ಲಿ ಒತ್ತಡ ನಿರ್ವಹಣೆಗಾಗಿ ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಸೂಕ್ಷ್ಮ ದೃಷ್ಟಿಕೋನದಿಂದ ನೋಡುವುದು ಇಂದಿನ ಅಗತ್ಯವಾಗಿದೆ ಎಂದು ಮಿರಜ ಪಟ್ಟಣದ ಜೂನಿಯರ್ ಸಿವ್ಹಿಲ್ ನ್ಯಾಯಾಧೀಶರಾದ ಎ.ಎಸ್. ರಾಣೆ ತಿಳಿಸಿದ್ದಾರೆ. ಅವರು, ಬುಧವಾರ ದಿ. 14 ರಂದು ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸನ ಮುಕ್ತಿ ಮತ್ತು ಪುನರವಸತಿ ಕೇಂದ್ರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ಯ ತಾಲೂಕಾ ಕಾನೂನು ಸೇವೆಗಳ ಸಮಿತಿ ಮಿರಜ ಮತ್ತು ಮಿರಜ ವಕೀಲರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯ ಜಾಗೃತಿ, ವ್ಯಸನ ಮುಕ್ತ ಭಾರತ ಮತ್ತು ಸೈಬರ್ ಸುರಕ್ಷತೆಯ ಪ್ರಮುಖ ವಿಷಯಗಳ ಕುರಿತು ನಡೆದ ಕಾನೂನು ಜಾಗೃತಿ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ಖ್ಯಾತ ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ದಿನ ಮತ್ತು ಮಾದಕ ದ್ರವ್ಯ ಮುಕ್ತ ಭಾರತ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಸಾಂಗಲಿ ಸೈಬರ್ ಪೊಲೀಸ್ ಠಾಣೆಯ ಕರಣ ಪರದೇಶಿ, ಮಿರಜ ಅಡ್ವೊಕೇಟ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ನೀತೀನ ಮಾನೆ, ಕಾರ್ಯದರ್ಶಿ ತೌಫಿಕ ಪಿರ್ಖಾನ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಕೊಲ್ಲಾಪುರದ ಡಾ. ದೀಪಕ ಪಾಟೀಲ ನಸಿಂರ್ಗ್ ಕಾಲೇಜು, ವಿಜಯಪೂರದ ಯಶೋದಾ ಕಾಲೇಜ್ ಆಫ್ ನಸಿಂರ್ಗ್ನ ವಿದ್ಯಾರ್ಥಿಗಳು, ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.