ಕಬ್ಬು ಹೋರಾಟಕ್ಕೆ ಕಾಗವಾಡ್ ರೈತರ ಬೆಂಬಲ..! ಶನಿವಾರ ರಸ್ತೆ ತಡೆಗೆ ವಿವಿಧ ಸಂಘಟನೆಗಳಿಂದ ಕರೆ..!!
ಲೋಕದರ್ಶನ ವರದಿ
ಕಾಗವಾಡ 15: ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವ ವರೆಗೆ ರೈತರು ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆ ರಸ್ತೆ ತಡೆ ನಡೆಸಿ, ಹೋರಾಟ ತೀವೃಗೊಳಿಸಿದ್ದು, ತಾಲೂಕಿನ ವಿವಿಧ ಸಂಘಟನೆಗಳು ಶನಿವಾರ ದಿ. 17 ರಂದು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆಗೆ ಕರೆ ನೀಡಿವೆ.
ಗುರುವಾರ ದಿ. 15 ರಂದು ತಹಶೀಲ್ದಾರ ರವೀಂದ್ರ ಹಾದಿಮನಿ ಮತ್ತು ಪಿಎಸ್ಐ ರಾಘವೇಂದ್ರ ಖೋತ್ ಅವರಿಗೆ ಮನವಿ ಸಲ್ಲಿಸಿದ ವಿವಧ ಸಂಘಟನೆಗಳ ಕಾರ್ಯಕರ್ತರು, ರಸ್ತೆ ತಡೆಗೆ ತಾಲೂಕಿನ ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿವೆ.
ಈ ವೇಳೆ ಪ್ರಗತಿಪರ ರೈತ ಎಂ.ಬಿ. ಉದಗಾಂವೆ ಮಾತನಾಡಿ, ಪ್ರತಿ ಟನ್ಗೆ ಕಬ್ಬಿಗೆ ರೂ. 5,500 ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರೈತರ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಸೂಕ್ತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಈ ಹೋರಾಟಕ್ಕೆ ನ್ಯಾಯವಾದಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಈ ಸಮಯದಲ್ಲಿ ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಶರದ ಪಾಟೀಲ, ಉಪಾಧ್ಯಕ್ಷ ನಾನಾಸಾಹೇಬ ಶಿರಗೂರೆ, ಕಾರ್ಯದರ್ಶಿ ವಿನಾಯಕ ಕಾಂಬಳೆ, ಕಾಕಾ ಪಾಟೀಲ, ಬಸಗೌಡ ಪಾಟೀಲ, ಪ್ರಮೋದ ಪೂಜಾರಿ, ಬಸವರಾಜ ಮಗದುಮ್ಮ, ಸಿದ್ದು ವಡೆಯರ, ಗಣೇಶ ಕೊಳೆಕರ, ಅರುಣ ಬಾಲೋಜಿ, ಆದಿನಾಥ ಬಿಂದಗೆ, ರಾವಸಾಬ ಜುಗೂಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.