ಆಸಿಡ್ಯ ದಾಳಿ ತಡೆಗೆ ಕಾನೂನು ಅರಿವು ಮೂಡಿಸುವುದು ಅಗತ್ಯ
ಲೋಕದರ್ಶನ ವರದಿ
ಹಾವೇರಿ 15: ಆಸಿಡ್ ದಾಳಿ ಕ್ರೌರ್ಯದ ಸಂಕೇತವಾಗಿದೆ. ಸಮಾಜದಲ್ಲಿ ಕಾನೂನು ಅರಿವು ಮೂಡಿಸುವ ಇಂತಹ ಕ್ರೌರ್ಯಗಳನ್ನು ತಡೆಗಟ್ಟಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರ್ಪ ಎನ್ ಅವರು ಹೇಳಿದರು.
ಹಾವೇರಿ ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾ ಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಸಿಡ್ ದಾಳಿ ಸಂತ್ರಸ್ಥರ ರಕ್ಷಣೆಯ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಸಿಡ್ ದಾಳಿ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಸಂತ್ರಸ್ಥರಾಗಿರುವುದು ವಿಷಾಧಕರ ಸಂಗತಿಯಾಗಿದೆ. ಯಾರೊಬ್ಬರಿಗೆ ಅನ್ಯಾಯವಾದಾಗ ಕ್ರೌರ್ಯವೇ ಪರಿಹಾರವಲ್ಲ. ಹಿಂದಿನ ಕಾಲದಿಂದಲೂ ಗಮನಿಸುತ್ತಾ ಬಂದರೆ, ಯಾವುದೇ ರೀತಿಯ ಜಗಳವಾದಲ್ಲಿ ಹಳ್ಳಿಗಳಲ್ಲಿ ಕಟ್ಟಿಪಂಚಾಯತಿ ಮಾಡುವ ಮೂಲಕ ಅನ್ಯಾಯವಾದವರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತಿತ್ತು.
ಅದೇ ರೀತಿ ಆಸಿಡ್ ದಾಳಿಗೊಳಗಾದ ಸಂತ್ರಸ್ಥರಿಗೂ ಕೂಡಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಧ್ಯಂತರ ಹಾಗೂ ಅಂತಿಮ ಪರಿಹಾರವನ್ನು ಸಂತ್ರಸ್ಥರು ಅರ್ಜಿ ಸಲ್ಲಿಸಿದಾಗ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕಳಿಸುವ ಮೂಲಕ 15 ರಿಂದ 20 ದಿನದೊಳಗಾಗಿ ಪರಿಹಾರ ಕೊಡಿಸಲಾಗುತ್ತದೆ. ಸಂತ್ರಸ್ಥರಿಗೆ ವೈದ್ಯಕೀಯ ಖರ್ಚು ಸೇರಿ ತಮ್ಮ ಇನ್ನಿತರೇ ವೆಚ್ಚಗಳನ್ನು ಸರಿದೂಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಶ್ರೀಶೈಲಜಾ ಎಚ್.ವಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ರೇವತಿ ಹೊಸಮಠ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ಪಾಟೀಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಸಿ.ಸಿದ್ದನಗೌಡ್ರ, ಡಾ.ನಿಲೇಶ ಇತರರು ಉಪಸ್ಥಿತರಿದ್ದರು.