ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಬಿ.ಡಿ. ಪಾಟೀಲ ಆಗ್ರಹ
ಲೋಕದರ್ಶನ ವರದಿ
ಇಂಡಿ 29: ನಗರಸಭೆ ವ್ಯಾಪ್ತಿಯ ಸಾತಪುರ ಗ್ರಾಮದಲ್ಲಿ ಅಕ್ಟೋಬರ್ 28ರಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸರ್ವೆ ನಂ. 201/1ರ ಜಮೀನಿನಲ್ಲಿ ಬೆಳೆದಿದ್ದ ಜಗದೇವಿ, ಶಿವಯೋಗಪ್ಪ, ಗುಡ್ಲ ಅವರಿಗೆ ಸೇರಿದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲರು, ನಷ್ಟಕ್ಕೀಡಾದ ರೈತರಿಗೆ ಸಾಂತ್ವನ ಹೇಳಿ, ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇಂಡಿ ತಾಲೂಕಿನಲ್ಲಿ ಪದೇ ಪದೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬು ಬೆಳೆ ನಾಶವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಸಂಬಂಧಪಟ್ಟ ಇಲಾಖೆಗಳು ವಿದ್ಯುತ್ ಮಾರ್ಗಗಳ ಸುರಕ್ಷತೆ ಪರೀಶೀಲಿಸಿ, ಬೆಂಕಿ ಅವಘಡಗಳಿಗೆ ಕಾರಣ ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು.
ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸಿ, ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವುದರ ಜೊತೆಗೆ ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಬಿ.ಡಿ. ಪಾಟೀಲರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಾಂಡು ಗುಡ್ಲ ಹಾಗೂ ಹಣಮಂತ ಗುಡ್ಲ ಉಪಸ್ಥಿತರಿದ್ದರು.