ಬೆಳಗಾವಿ

ರೈತರ ಕೃಷಿ ಉಪಕರಣ ಕಳವು: ಇಬ್ಬರ ಬಂಧನ, 2.92 ಲಕ್ಷ ಮೌಲ್ಯದ ವಸ್ತು ಜಪ್ತಿ

ರೈತರ ಕೃಷಿ ಉಪಕರಣ ಕಳವು: ಇಬ್ಬರ ಬಂಧನ, 2.92 ಲಕ್ಷ ಮೌಲ್ಯದ ವಸ್ತು ಜಪ್ತಿ

ಬೆಳಗಾವಿ 29: ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ರೈತರ ಜಮೀನುಗಳಲ್ಲಿದ್ದ ವಿದ್ಯುತ್ ಮೋಟಾರ್‌ಗಳು, ಬೋರ್‌ವೆಲ್ ಸ್ಟಾರ್ಟರ್‌ಗಳು ಹಾಗೂ ಕೇಬಲ್ ವೈರ್‌ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿ, ಸುಮಾರು 2.92 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಘಟನೆ ವಿವರ : 

ಶಿರಹಟ್ಟಿ ಬಿ.ಕೆ. ಗ್ರಾಮದ ಕುಮಾರ ಕಲ್ಲಪ್ಪ ಖೋತ ಅವರ ಜಮೀನಿನ ಬಾವಿಗೆ ಅಳವಡಿಸಿದ್ದ 5 ಹೆಚ್‌ಪಿ ಮತ್ತು 2 ಹೆಚ್‌ಪಿ ವಿದ್ಯುತ್ ಮೋಟಾರ್‌ಗಳು, ಎಲ್‌ಟಿಎಲ್‌ಕೆ ಕಂಪನಿಯ ಬೋರ್‌ವೆಲ್ ಸ್ಟಾರ್ಟರ್ ಹಾಗೂ ಸುಮಾರು 1,000 ಅಡಿ ಕೇಬಲ್ ವೈರ್‌ಗಳನ್ನು ಕಳ್ಳರು ಕಳವು ಮಾಡಿದ್ದರು. ಈ ವಸ್ತುಗಳ ಒಟ್ಟು ಮೌಲ್ಯ 80,000 ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಅದೇ ಗ್ರಾಮದ ಬಸವಂತಪ್ಪ ಸಾತಪ್ಪ ದಪಾದೂಳಿ ಅವರ ಜಮೀನಿನಲ್ಲಿದ್ದ ವಿದ್ಯುತ್ ಮೋಟಾರ್‌ಗಳು ಹಾಗೂ ಬೋರ್‌ವೆಲ್ ಸ್ಟಾರ್ಟರ್‌ಗಳನ್ನೂ ಕಳವು ಮಾಡಲಾಗಿತ್ತು. ಇದರ ಮೌಲ್ಯ 35,000 ಎಂದು ಅಂದಾಜಿಸಲಾಗಿತ್ತು.

ಇದಲ್ಲದೆ, ದಯಾನಂದ ಅಣ್ಣಪ್ಪ ರಸದ ಅವರ ಜಮೀನಿನಲ್ಲಿ 78,000 ಮೌಲ್ಯದ ವಸ್ತುಗಳು ಹಾಗೂ ಕಾಡಪ್ಪ ಕಲ್ಲಪ್ಪ ಕೋಜ್ಜರಗಿ ಅವರ ಜಮೀನಿನ ಬಾವಿಯ ದಂಡೆಯಲ್ಲಿದ್ದ 57,000 ಮೌಲ್ಯದ ವಸ್ತುಗಳನ್ನು ಕಳ್ಳರು ಕಳವು ಮಾಡಿರುವ ಕುರಿತು ದೂರುಗಳು ದಾಖಲಾಗಿದ್ದವು.

ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ಇಬ್ಬರು ಆರೋಪಿಗಳ ಬಂಧನ ; 

ಪ್ರಕರಣಗಳ ಪತ್ತೆಗಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಗೋಕಾಕ ಉಪವಿಭಾಗದ ಡಿವೈಎಸ್‌ಪಿ ರವಿ ಡಿ. ನಾಯಕ ಅವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಆರ್. ಗಣಾಚಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

ತಂಡದಲ್ಲಿ ಪಿಎಸ್‌ಐ ರಾಜು ಗಸ್ತಿ, ಎಎಸ್‌ಐ ಬಿ.ಎಂ. ರಿಜಕನವರ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಕಾರ್ಯಾಚರಣೆಯಲ್ಲಿ ಶಿರಹಟ್ಟಿ ಬಿ.ಕೆ. ಗ್ರಾಮದ ವಾಶೇಪ್ಪ ರಾಮಪ್ಪ ಹಾಲಟ್ಟಿ (40) ಹಾಗೂ ಮಾಯಪ್ಪ ಅಡಿವೇಪ್ಪ ಹಾಲಟ್ಟಿ (42) ಎಂಬ ಇಬ್ಬರು ಆರೋಪಿಗಳನ್ನು ಅ. 28ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2.92 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ : 

ಆರೋಪಿಗಳಿಂದ ವಿವಿಧ ಕಂಪನಿಗಳ 5 ಹೆಚ್‌ಪಿ ಮತ್ತು 2 ಹೆಚ್‌ಪಿ ವಿದ್ಯುತ್ ಮೋಟಾರ್‌ಗಳು, ಬೋರ್‌ವೆಲ್ ಸ್ಟಾರ್ಟರ್‌ಗಳು, ಸುಮಾರು 900, 600 ಹಾಗೂ 1,000 ಅಡಿ ಉದ್ದದ ಕೇಬಲ್ ವೈರ್‌ಗಳು, ಪಕ್ಕಡ, ನ್ಯೂ ಡ್ರೈವರ್ ಹಾಗೂ ಕೆಎ-19-ಇಟಿ-3989 ನೋಂದಣಿ ಸಂಖ್ಯೆಯ ಹೀರೋ ಎಚ್‌ಎಫ್ ಡಿಲಕ್ಸ್ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 2,92,000 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳನ್ನು ಹುಕ್ಕೇರಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತರ ಜಮೀನುಗಳಲ್ಲಿನ ಕೃಷಿ ಉಪಕರಣಗಳ ಕಳವು ಪ್ರಕರಣಗಳನ್ನು ಪತ್ತೆಹಚ್ಚಿ, ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಹುಕ್ಕೇರಿ ಪೊಲೀಸರ ತಂಡ ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ರಾಜು ಗಸ್ತಿ ಪಿ.ಎಸ್.ಐ ಮತ್ತು ಬಿ.ಎಮ್ ರಿಜಕನವರ ಎ.ಎಸ್.ಐ ಮತ್ತು ಎ.ಎನ್.ಮಸರಗುಪ್ಪಿ, ಮಂಜುನಾಥ ಕಬ್ಬೂರು, ಕುಮಾರ ಕರೆನ್ನವರ, ಎ,ಎಸ್ ಜೈನಾಪೂರ, ಆರ್.ಎಮ್ ಪಡತಾರೆ ಇವರು ಭಾಗವಹಿಸಿದ್ದರು.

ಸುದ್ದಿ ಓದಿ