ಇಂಡಿ

ಒಂದೇ ದಿನದಲ್ಲಿ ಐರಸಂಗ, ಹಂಜಗಿ ಗ್ರಾಮಗಳಲ್ಲಿ ಕಬ್ಬು ಬೆಂಕಿಗೆ ಆಹುತಿ

ಒಂದೇ ದಿನದಲ್ಲಿ ಐರಸಂಗ, ಹಂಜಗಿ ಗ್ರಾಮಗಳಲ್ಲಿ ಕಬ್ಬು ಬೆಂಕಿಗೆ ಆಹುತಿ



ಲೋಕದರ್ಶನ ವರದಿ  

        ಇಂಡಿ 27 : ತಾಲ್ಲೂಕಿನಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ನಿಂದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗುವ ಘಟನೆಗಳು ಪದೇಪದೇ ಸಂಭವಿಸುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ಟೋಬರ್ 27ರಂದು ಒಂದೇ ದಿನದಲ್ಲಿ ಐರಸಂಗ ಹಾಗೂ ಹಂಜಗಿ ಗ್ರಾಮಗಳಲ್ಲಿ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

            ಐರಸಂಗ ಗ್ರಾಮದ ಶ್ರೀಮತಿ ಹೀನಾ ಮೊಮ್ಮದ್, ಶೇಖ್ ಅವರಿಗೆ ಸೇರಿದ ಸರ್ವೇ ನಂಬರ್ 165/1ರಲ್ಲಿನ ಸುಮಾರು 2.33 ಎಕರೆ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅದೇ ದಿನ ಹಂಜಗಿ ಗ್ರಾಮದಲ್ಲಿ ಶ್ರೀಶೈಲ ಪಾಯಕರ ಅವರಿಗೆ ಸೇರಿದ 3 ಎಕರೆ ಹಾಗೂ ಭೀಮರಾಯ ಕೋಟಲಗಿ ಅವರಿಗೆ ಸೇರಿದ 1 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.              ರೈತರು ವರ್ಷಾನುಗಟ್ಟಲೆ ಶ್ರಮಪಟ್ಟು ಬೆಳೆದ ಕಬ್ಬು ಕಣ್ಣೆದುರೇ ಸುಟ್ಟುಹೋಗಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲ ಅವರು ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ, ಹಾನಿಯ ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

         ವಿದ್ಯುತ್ ಅವಘಡಗಳ ಕುರಿತು ಸಮಗ್ರ ತನಿಖೆಗೆ ಆಗ್ರಹ:  ಇಂಡಿ ತಾಲ್ಲೂಕಿನಲ್ಲಿ ಪದೇಪದೇ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ನಿಂದ ಕಬ್ಬಿನ ಬೆಳೆ ನಾಶವಾಗುತ್ತಿರುವುದು ಗಂಭೀರ ವಿಷಯವಾಗಿದೆ. ಒಂದೇ ದಿನದಲ್ಲಿ ಎರಡು ಗ್ರಾಮಗಳಲ್ಲಿ ಹಲವು ರೈತರ ಕಬ್ಬಿನ ಬೆಳೆ ಹಾನಿಗೊಳಗಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

            ರೈತರ ವರ್ಷಪೂರ್ತಿ ಶ್ರಮ ಹಾಗೂ ಬಂಡವಾಳ ಬೆಂಕಿಗೆ ಆಹುತಿಯಾಗುತ್ತಿರುವುದನ್ನು ತಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಬಿ.ಡಿ. ಪಾಟೀಲ ಒತ್ತಾಯಿಸಿದರು. ಇದೆ ಸಂದರ್ಭದಲ್ಲಿ ಯಶವಂತ ಕಾಡೆಗೋಳ, ಪ್ರಭಾಕರ ಬಿರಾದಾರ, ಚೌಡಪ್ಪ ಪೂಜಾರಿ, ಹುಸೇನಿ ಶೇಖ ಉಪಸ್ಥಿತರಿದ್ದರು. 


ಸುದ್ದಿ ಓದಿ