ಜಮಖಂಡಿ

ಪತ್ರಕರ್ತರ ಲೇಖನಿ ಸಮಾಜ ಸುಧಾರಣೆಯ ಶಕ್ತಿಶಾಲಿ ಅಸ್ತ್ರ: ಆನಂದ ದೇವರು

ಪತ್ರಕರ್ತರ ಲೇಖನಿ ಸಮಾಜ ಸುಧಾರಣೆಯ ಶಕ್ತಿಶಾಲಿ ಅಸ್ತ್ರ: ಆನಂದ ದೇವರು



ಲೋಕದರ್ಶನ ವರದಿ 

            ಜಮಖಂಡಿ 31 : ಪತ್ರಿಕಾರಂಗವು ದೇಶದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಓಲೇಮಠದ ಆನಂದ ದೇವರು ಹೇಳಿದರು.  ನಗರದ ಬಸವ ಭವನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆಯ ವತಿಯಿಂದ ಪತ್ರಕರ್ತರ ರಾಜ್ಯಮಟ್ಟದ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

             ಸಮಾಜದ ಯಾವುದೇ ಕ್ಷೇತ್ರದಲ್ಲಿ ತಪ್ಪುಗಳು ನಡೆದಾಗ ಅವುಗಳನ್ನು ಗುರುತಿಸಿ, ತಪ್ಪು ಮಾಡಿದವರಿಗೆ ಎಚ್ಚರಿಕೆ ನೀಡಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾ ಮಾಧ್ಯಮ ಮಾಡುತ್ತದೆ. ಪತ್ರಕರ್ತರ ಕೈಯಲ್ಲಿರುವ ಪೆನ್ನು ಇಡೀ ಸಮಾಜವನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ. ಈ ಶಕ್ತಿಯನ್ನು ಪತ್ರಕರ್ತರು ಅತ್ಯಂತ ಜವಾಬ್ದಾರಿಯಿಂದ ಬಳಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು. 

            ಹಿರಿಯ ಪತ್ರಕರ್ತ ಡಾ. ಟಿ.ಪಿ. ಗಿರಡ್ಡಿ ಮಾತನಾಡಿ, ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ನಡೆಯುವ ಅಂಕು-ಡೊಂಕುಗಳನ್ನು ಗುರುತಿಸಲು ಪತ್ರಕರ್ತರ ಕಣ್ಣು ಮತ್ತು ಕಿವಿಗಳು ಸದಾ ಎಚ್ಚರಿಕೆಯಿಂದ ಇರಬೇಕು. ಒಂದು ಸುದ್ದಿಯನ್ನು ಪತ್ತೆಹಚ್ಚಿ, ಅದರ ಸತ್ಯಾಸತ್ಯತೆಯನ್ನು ಅರಿತುಕೊಂಡು ಜನರಿಗೆ ತಲುಪಿಸುವುದು ಪತ್ರಕರ್ತರ ಕರ್ತವ್ಯವಾಗಿದೆ. ಸಮಾಜವನ್ನು ತಿದ್ದುವ ಕಾರ್ಯವೇ ನಿಜವಾದ ಪತ್ರಿಕಾ ಧರ್ಮವಾಗಿದೆ ಎಂದರು.  ಸಂದೀಪ ಬೆಳಗಲಿ ಹಾಗೂ ರುದ್ರಯ್ಯ ಕರಡ್ಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

            ಕಾರ್ಯಕ್ರಮದಲ್ಲಿ ಸಾಹಿತಿ ಬಸವರಾಜ ಕಡ್ಡಿ, ಹಿರಿಯ ಪತ್ರಕರ್ತ ಮತ್ತು ಕೆ. ಶಿರಾಂ ಚಲವಾದಿ ಮಹಾಸಭಾ ಅಧ್ಯಕ್ಷ ಶಶಿಕಾಂತ ತೇರದಾಳ, ಸಮಾಜ ಸೇವಕ ಪ್ರದೀಪ ಮೆಟ್ಟಗುಡ್ಡ, ಕಾಯಕರತ್ನ ಮಹಿಳಾ ಸಂಘಟನೆಯ ಅಧ್ಯಕ್ಷೆ ಯಶೋಧಾ ಲಮಾಣಿ, ಪತ್ರಕರ್ತರಾದ ಸರೋಜಿನಿ ಅರಗೆ, ಲಕ್ಷ್ಮಣ ಕಾಂಬಳೆ, ಶಿವಶಾಂತಕುಮಾರ ಮಡ್ಡಿ, ರವಿ ಶಿಂಗೆ, ಗಜಾನನ ಆಲಬಾಳ, ದಲಿತ ಮುಖಂಡ ರಮೇಶ ಬಳೋಲಗಿಡದ, ಬಸಪ್ಪ ಕಾಗವಾಡ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಕ್ಷಣಾ ಸಂಘಟನೆಯ ರಾಜ್ಯಾಧ್ಯಕ್ಷ ರವಿ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಡಾ. ಎನ್‌.ವಿ. ಅಸ್ಕಿ ಹಾಗೂ ಶಿಕ್ಷಕಿ ಶ್ವೇತಾ ಕಲೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

               ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರಧಾನ : ಇದೇ ಸಂದರ್ಭದಲ್ಲಿ ರೈತರು, ಯೋಧರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಅಲ್ಲದೆ, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 


ಸುದ್ದಿ ಓದಿ