ಡಾ. ಅಭಿನವ ಕುಮಾರ ಚನ್ನಬಸವ ಶ್ರೀಗಳ ಪುಣ್ಯಾರಾಧನೆಗೆ ಸಿದ್ಧತೆ
ಲೋಕದರ್ಶನ ವರದಿ,
ಜಮಖಂಡಿ 26 : ಓಲೇಮಠದ ಲಿಂಗೈಕ್ಯ ಡಾ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳ ಎರಡನೇ ವರ್ಷದ ಪುಣ್ಯಾರಾಧನೆ ನವೆಂಬರ್ 7ರಂದು ನಡೆಯಲಿದ್ದು, ಅಂದು ಆನಂದ ದೇವರ ಪಟ್ಟಾಧೀಕಾರದ ದಿನಾಂಕವನ್ನು ಸಹ ನಿಗದಿಪಡಿಸಲಾಗುವುದು ಎಂದು ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು. ನಗರದ ಓಲೇಮಠದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,
ಅಂದು ವಿವಿಧ ಮಠಾಧೀಶರು, ಸರ್ವಧರ್ಮದ ಮುಖಂಡರು ಹಾಗೂ ಭಕ್ತರ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಸರ್ವಧರ್ಮದ ಮುಖಂಡರ ಸಮಿತಿ ರಚಿಸುವುದರ ಜೊತೆಗೆ ಭಕ್ತರ ಒಪ್ಪಿಗೆ ಪಡೆದು ಆನಂದ ದೇವರ ಪಟ್ಟಾಧೀಕಾರದ ಕುರಿತು ಎಲ್ಲ ಮಠಾಧೀಶರ ಒಪ್ಪಿಗೆ ಮೇರೆಗೆ ದಿನಾಂಕ ಅಂತಿಮಗೊಳಿಸಲಾಗುವುದು ಎಂದರು.
ಓಲೇಮಠವು ಶರಣರ ವಚನಗಳನ್ನು ಸಂಗ್ರಹಿಸಿ, ಪ್ರಸಾರ ಮಾಡಿದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಇಂತಹ ಮಠದ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆನಂದ ದೇವರು ಮಠದ ಉತ್ತರಾಧಿಕಾರಿಯಾಗಿ ಪಟ್ಟಾಧೀಕಾರ ಸ್ವೀಕರಿಸುವ ಮೂಲಕ ಮಠದ ಕೀರ್ತಿ ಮತ್ತಷ್ಟು ವಿಸ್ತಾರಗೊಳ್ಳಬೇಕು.
ಮಠವು ಕೇವಲ ಸ್ವಾಮೀಜಿಗಳ ಮಠವಾಗದೆ, ಭಕ್ತರೆಲ್ಲರ ಮಠವಾಗಬೇಕು. ಸ್ವಾಮೀಜಿಗಳು ಮತ್ತು ಭಕ್ತರ ಸಂಬಂಧ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಎಲ್ಲರೂ ಮಠದ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಠದ ಕೀರ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ: ಓಲೇಮಠದ ಉತ್ತರಾಧಿಕಾರಿ ಆನಂದ ದೇವರು ಮಾತನಾಡಿ, ಲಿಂಗೈಕ್ಯ ಡಾ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ಸಮಾಜಮುಖಿ ಸೇವೆಯ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಅವರ ಮಾರ್ಗದಲ್ಲಿ ಮುನ್ನಡೆಯುವುದು ನನ್ನ ಉದ್ದೇಶವಾಗಿದೆ.
ಸುತ್ತಮುತ್ತಲಿನ ಗ್ರಾಮಗಳ ಜನರು ತೋರಿಸುತ್ತಿರುವ ಪ್ರೀತಿ ಮತ್ತು ವಿಶ್ವಾಸ ನನಗೆ ಪ್ರೇರಣೆಯಾಗಿದೆ. ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಸಂದೇಶದೊಂದಿಗೆ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ, ಸುಮಾರು 10 ಸಾವಿರಕ್ಕೂ ಅಧಿಕ ಜನರು ದುಶ್ಚಟಗಳನ್ನು ತ್ಯಜಿಸಲು ಪ್ರೇರಣೆ ನೀಡಿದ್ದೇನೆ ಎಂದರು.