ಮಹರ್ಷಿ ವಾಲ್ಮೀಕಿಯವರ ಚಿಂತನೆಗಳು ಈಗಲೂ ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತವೆ : ಪ್ರೊ.ಡಿ. ಎನ್. ಪಾಟೀಲ್
ಲೋಕದರ್ಶನ ವರದಿ
ಬೆಳಗಾವಿ 26: ಮಹರ್ಷಿ ವಾಲ್ಮೀಕಿಯವರ ಚಿಂತನೆಗಳು ಈಗಲೂ ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ವಿಚಾರಗಳಿಗೆ ಜಗತ್ತನ್ನು ಆಳುವ ಶಕ್ತಿ ಇದ್ದು, ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ವಿಚಾರಗಳನ್ನು ಸಮುದಾಯಕ್ಕೆ ಮುಟ್ಟಿಸುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಡಿ. ಎನ್. ಪಾಟೀಲ್ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ತಮ್ಮ ಮಹಾಕಾವ್ಯ ರಾಮಾಯಣದ ಮೂಲಕ ವೈಯಕ್ತಿಕ ಹೊಣೆಗಾರಿಕೆ,
ಸ್ವಯಂ ಸುಧಾರಣೆ ಮತ್ತು ಸಮರಾ್ಣ ಮನೋಭಾವದಂತಹ ಸಾರ್ಥಕ ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತಿದ್ದಾರೆ. ನಾವೆಲ್ಲರೂ ನಮ್ಮ ನಿತ್ಯದ ಬದುಕಿನಲ್ಲಿ ರಾಮಾಯಣದ ಪಾತ್ರಗಳನ್ನು ಅನುಸರಿಸುತ್ತೇವೆ. ನಮ್ಮ ಬದುಕಿನಲ್ಲಿ ಆಸೆ ಆಕಾಂಕ್ಷೆಗಳು ಸರಿಯಾದ ಹೊಣೆಗಾರಿಕೆಯಿಂದ ಕೂಡಿರಬೇಕು ಎಂದು ರಾಮಾಯಣ ಒತ್ತಿ ಹೇಳುತ್ತದೆ ಎಂದು ಹೇಳಿದರು.
ಕುಲಸಚಿವರಾದ ಸಂತೋಷ ಕಾಮಗೌಡ ಮಾತನಾಡಿ, ರಾಮಾಯಣದ ಎಲ್ಲ ಪಾತ್ರಗಳು ನಮ್ಮ ಬದುಕಿಗೆ ವಿಶೇಷ ದೃಷ್ಟಿಕೋನವನ್ನು ನೀಡುತ್ತವೆ. ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯದಲ್ಲಿ ಅಡಗಿದ ತ್ಯಾಗ ಮತ್ತು ಸಾರ್ಥಕತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಮತ್ತು ಮಹಾಕಾವ್ಯದ ಒಳ್ಳೆಯ ವಿಚಾರಗಳು ಸದಾ ಕಾಲ ಉಳಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಇವರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಸಮಸ್ತ ಬ್ರಹ್ಮಾಂಡದಲ್ಲಿ ಶಾಶ್ವತ ಪ್ರಯಾಣದ ಅರಿವಿನ ಹೆಜ್ಜೆಗಳನ್ನು ಇಟ್ಟಿದ್ದಾರೆ. ಅವರು ಬಿತ್ತಿದ ಅರಿವಿನ ದೀಪ ಎಲ್ಲ ಕಾಲಕ್ಕೂ ಬೆಳಗುತ್ತದೆ. ಇಂತಹ ಶ್ರೇಷ್ಠ ಗ್ರಂಥಗಳ ಅಧ್ಯಯನ ಈ ಕಾಲದ ಅಗತ್ಯ , ಆಗಲೇ ಒಳ್ಳೆಯ ವಿಚಾರಗಳ ಪೋಷಣೆ ಸದಾ ಚಲನೆಯಲ್ಲಿರುತ್ತದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರ್ದೇಶರಾದ ಪ್ರೊ. ವಿ ಎಸ್ ಶೀಗೆಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿಗಳಾದ ಪ್ರೊ.ಬಿ.ಎಸ್.ನಾವಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ಡಾ.ಸಿದ್ದಲಿಂಗೇಶ್ವರ ಬಿದರಳ್ಳಿ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.