ಬೆಳಗಾವಿ

ಚನ್ನರಾಜ ಹಟ್ಟಿಹೊಳಿ ಆಗ್ರಹಕ್ಕೆ ಮಹತ್ವದ ಸ್ಪಂದನೆ: ವಾಯವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು

ಚನ್ನರಾಜ ಹಟ್ಟಿಹೊಳಿ ಆಗ್ರಹಕ್ಕೆ ಮಹತ್ವದ ಸ್ಪಂದನೆ: ವಾಯವ್ಯ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು
Significant response to Channaraja Hattiholi’s demand: North-West Transport Corporation to be named



 ಕಿತ್ತೂರು 26 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರಿಡಬೇಕೆಂಬ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಆಗ್ರಹಕ್ಕೆ ಮಹತ್ವದ ಸ್ಪಂದನೆ ದೊರೆತಿದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದಾರೆ. ಕಿತ್ತೂರಿನಲ್ಲಿ ಭಾನುವಾರ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ವೀರರಾಣಿ ಚನ್ನಮ್ಮನ ಸಾಹಸ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂಬ ಆಶಯದೊಂದಿಗೆ ಸಾರಿಗೆ ಸಂಸ್ಥೆಗೆ ಅವರ ಹೆಸರಿಡುವ ಮಹತ್ವದ ಘೋಷಣೆ ಮಾಡಿದರು. ಈ ಬೇಡಿಕೆಯ ಹಿಂದೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ನಿರಂತರ ಪ್ರಯತ್ನ ಹಾಗೂ ಸದನದಲ್ಲಿ ಅವರು ಎತ್ತಿದ್ದ ಧ್ವನಿ ಪ್ರಮುಖವಾಗಿ ಗಮನ ಸೆಳೆಯುತ್ತದೆ.ಕಳೆದ ವರ್ಷ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಚನ್ನರಾಜ ಹಟ್ಟಿಹೊಳಿ ಅವರು ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಬೇಕೆಂದು ಸುದೀರ್ಘವಾಗಿ ಪ್ರತಿಪಾದಿಸಿದ್ದರು. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ಚನ್ನಮ್ಮನ ಹೆಸರಿಡಬೇಕು ಎಂಬುದು ಈ ಭಾಗದ ಜನರ ಆಶಯವಾಗಿದೆ ಎಂದು ಸದನದ ಗಮನ ಸೆಳೆದಿದ್ದ ಅವರು, ನಾಡಿನ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಹೊಂದಿರುವ ವೀರರಾಣಿಯ ಹೆಸರನ್ನು ಸಾರಿಗೆ ಸಂಸ್ಥೆಗೆ ಇಡುವ ಮೂಲಕ ಅವರ ಶೌರ್ಯ, ತ್ಯಾಗ ಮತ್ತು ಹೋರಾಟದ ಪರಂಪರೆಗೆ ಗೌರವ ಸಲ್ಲಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು.  ಚನ್ನರಾಜ ಹಟ್ಟಿಹೊಳಿ ಅವರ ಸದನದ ಆಗ್ರಹಕ್ಕೆ ಇದೀಗ ಕಿತ್ತೂರು ಉತ್ಸವದ ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಘೋಷಣೆಯ ರೂಪದಲ್ಲಿ ಮಹತ್ವದ ಮನ್ನಣೆ ದೊರೆತಂತಾಗಿದೆ. ಸಾರಿಗೆ ಸಂಸ್ಥೆಯ ಹೆಸರಿನೊಂದಿಗೆ ಕಿತ್ತೂರು ರಾಣಿ ಚನ್ನಮ್ಮನ ಕೀರ್ತಿ ನಾಡಿನಾದ್ಯಂತ ಮತ್ತಷ್ಟು ಪಸರಿಸುವ ನೀರೀಕ್ಷೆಯಿದೆ.  ಕಿತ್ತೂರು ಉತ್ಸವದ ಸಂದರ್ಭದಲ್ಲಿ ಹೊರಬಿದ್ದಿರುವ ಈ ಘೋಷಣೆ, ಚನ್ನಮ್ಮನ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿಯೂ ಮಹತ್ವ ಪಡೆದಿದೆ. 


ಸುದ್ದಿ ಓದಿ