ಜಮಖಂಡಿಯಲ್ಲಿ ರಂಭಾಪುರಿ ಪೀಠದ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ
ಜಮಖಂಡಿ 23 : ನಗರದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು. . ನಗರದ ಹನುಮಾನ ಚೌಕ್, ಪೋಸ್ಟ್ ಚೌಕ್, ಸುವರ್ಣ ಚಿತ್ರಮಂದಿರ, ಅಶೋಕ ವೃತ್ತ ಹಾಗೂ ದೇಸಾಯಿ ಸರ್ಕಲ್ ಮಾರ್ಗವಾಗಿ ಸಾಗಿದ ಭವ್ಯ ಮೆರವಣಿಗೆ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಮಾನವ ಧರ್ಮ ಮಂಟಪ ತಲುಪಿತು. ಮಾರ್ಗದುದ್ದಕ್ಕೂ ಭಕ್ತರು ಜಗದ್ಗುರುಗಳ ದರ್ಶನ ಪಡೆದು ಭಕ್ತಿಭಾವ ಮೆರೆದರು. ಮಹೋತ್ಸವದಲ್ಲಿ ಕುಂಭ ಹೊತ್ತು ಸಾಗಿದ ಸುಮಂಗಲೆಯರು, ಆರತಿ ಹಿಡಿದ ಮಹಿಳೆಯರು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಿಗೀತೆಗಳ ಲಯಕ್ಕೆ ಮಹಿಳೆಯರು ಹೆಜ್ಜೆ ಹಾಕಿ ಮೆರವಣಿಗೆಯ ಸಂಭ್ರಮವನ್ನು ಹೆಚ್ಚಿಸಿದರು. ವೀರಭದ್ರೇಶ್ವರ ದೇವಸ್ಥಾನದ ಪುರವಂತರ ವೀರಗಾಸೆ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.ಕಡಪಟ್ಟಿ ಗ್ರಾಮದಲ್ಲಿ ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಗದ್ಗುರುಗಳು ಭಕ್ತರಿಗೆ ಬನ್ನಿ ವಿತರಿಸಿದರು. ಕರಡಿ ಮಜಲು, ಜಾಂಜ್ ಪಥಕ್, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯಮೇಳಗಳ ನಿನಾದ, ಭಕ್ತರ ಜಯಘೋಷ ಹಾಗೂ ಧಾರ್ಮಿಕ ಆಚರಣೆಗಳು ಇಡೀ ನಗರದ ವಾತಾವರಣವನ್ನು ಭಕ್ತಿಮಯಗೊಳಿಸಿದವು. ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ನಡೆದ ಈ ಅಡ್ಡಪಲ್ಲಕ್ಕಿ ಮಹೋತ್ಸವವು ಧಾರ್ಮಿಕ ಪರಂಪರೆಯ ವೈಭವವನ್ನು ಸಾರುವುದರ ಜೊತೆಗೆ ವಿವಿಧ ಸಮುದಾಯಗಳ ಮುಖಂಡರು ಒಂದಾಗಿ ಪಾಲ್ಗೊಳ್ಳುವ ಮೂಲಕ ಭಕ್ತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿತು. ಈ ಸಂದರ್ಭದಲ್ಲಿ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು ಹಾಗೂ ವಿವಿಧ ಮಠಾಧೀಶರು ಸೇರಿದಂತೆ ವಿವಿಧ ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.