ಶಿಷ್ಯನಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವವನೇ ಗುರು- ಶ್ರೀರಂಭಾಪುರಿ
ಲೋಕದರ್ಶನ ವರದಿ
ಜಮಖಂಡಿ 21: ಶಿವಾಗಮಗಳಲ್ಲಿ ಶಿವತತ್ವ ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸಿದರೆ ವಚನಗಳು ಶಿವತತ್ವವನ್ನು ಜೀವನದ ಅನುಭವದೊಂದಿಗೆ ಬೆಸೆಯುತ್ತವೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ,ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಕಡಪಟ್ಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾನವಧರ್ಮ ಮಂಟಪದಲ್ಲಿ ಬಾಳೆಹೊನ್ನೂರ ರಂಭಾಪುರಿ ಸ್ವಾಮೀಜಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಗುರುವು ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡುವವನು. ಶಿಷ್ಯನಿಗೆ ಶಿವತತ್ವ ಲಿಂಗದ ಮಹತ್ವ ಆಧ್ಯಾತ್ಮಿಕ ಸಾಧನೆ ಮತ್ತು ನೈತಿಕ ಜೀವನ ಕುರಿತು ಮಾರ್ಗದರ್ಶನ ನೀಡುತ್ತಾನೆ.
ಗುರುಕೃಪೆಯಿಂದ ಶಿಷ್ಯನಲ್ಲಿ ಆತ್ಮವಿಶ್ವಾಸ ವಿವೇಕ ಮತ್ತು ಆತ್ಮ ಪರೀಶೀಲನೆಯ ಗುಣಗಳು ಬೆಳೆಯುತ್ತವೆ. ವೀರಶೈವ ಪರಂಪರೆಯಲ್ಲಿ ಸಿದ್ದಾಂತ ಸಾಧನೆ ಮತ್ತು ಸಂಪ್ರದಾಯಗಳ ಸಂರಕ್ಷಣೆಯಲ್ಲಿ ಗುರುಪೀಠಗಳು ಹಾಗೂ ಮಠಗಳು ಮಹತ್ವದ ಪಾತ್ರವಹಿಸಿವೆ. ಗುರು ಪರಂಪರೆಯು ಆಧ್ಯಾತ್ಮಿಕ ಜ್ಞಾನ ಶಿವತತ್ವ ಮತ್ತು ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಪರಂಪರೆಯಾಗಿದೆ.
ಶಿವಾಗಮಗಳು ಪೂಜೆ ದೀಕ್ಷೆಯೋಗ ಮತ್ತು ಸಾಧನೆಗಳಿಗೆ ಮಾರ್ಗದರ್ಶನ ನೀಡಿದರೆ ವಚನಗಳು ಕಾಯಕದಾಸೋಹ ಮತ್ತು ಸದಾಚಾರಕ್ಕೆ ಪ್ರೇರಣೆ ನೀಡುತ್ತವೆ. ಶಿವಾಗಮಗಳು ಆಧ್ಯಾತ್ಮಿಕ ಸಾಧನೆಯ ಕ್ರಮಗಳನ್ನು ತಿಳಿಸಿದರೆ ವಚನಗಳು ಆಧ್ಯಾತ್ಮಿಕ ಮೌಲ್ಯಗಳನ್ನು ದೈನಂದಿನ ಜೀವನದಲ್ಲಿ ಪಾಲಿಸಲು ತಿಳಿಸುತ್ತದೆ.
ಶಿವಾಗಮಗಳು ಪರಂಪರೆಯತಾತ್ವಿಕ ಅಡಿಪಾಯ ಒದಗಿಸಿದರೆ ವಚನಗಳು ಅನುಭವದ ಮೂಲಕ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತವೆ. ಶಿವಾಗಮಗಳು ಕೇವಲ ಪೂಜಾ ವಿಧಾನಗಳನ್ನು ತಿಳಿಸುವ ಗ್ರಂಥಗಳಲ್ಲ. ನಾವು ಶಿವ ತತ್ವವನ್ನು ಅರಿಯುವ ಮತ್ತು ಆಧ್ಯಾತ್ಮಿಕ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗದರ್ಶಿಗಳಾಗಿವೆ ಎಂದರು.