ಜಮಖಂಡಿ

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಸಂಸ್ಥೆ ಸಿಟಿಇ: ಈಶ್ವರ ಉಳಾಗಡ್ಡಿ

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಸಂಸ್ಥೆ ಸಿಟಿಇ: ಈಶ್ವರ ಉಳಾಗಡ್ಡಿ

ಲೋಕದರ್ಶನ ವರದಿ, 

ಜಮಖಂಡಿ 19:  ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಸಂಸ್ಥೆ ಸಿಟಿಇ ಆಗಿದೆ. ಶಾಲಾ-ಕಾಲೇಜುಗಳ ದಿನಗಳಲ್ಲಿ ಬೆಳೆಸಿಕೊಂಡ ಸ್ನೇಹ ಮತ್ತು ಸಂಬಂಧಗಳು ಜೀವನಪಯಂರ್ತ ಅವಿನಾಭಾವ ಸಂಬಂಧವಾಗಿ ಉಳಿಯುತ್ತವೆ ಎಂದು ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಈಶ್ವರ ಉಳಾಗಡ್ಡಿ ಹೇಳಿದರು.

ನಗರದ ಜಿ.ಜಿ. ಪ್ರೌಢಶಾಲೆಯ ಆವರಣದಲ್ಲಿ ನಡೆದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ), ಹಿರಿಯ ವಿದ್ಯಾರ್ಥಿಗಳು ಹಾಗೂ ವಿಶ್ರಾಂತ ಉಪನ್ಯಾಸಕರ ಒಕ್ಕೂಟದ ಸಹಯೋಗದಲ್ಲಿ ಸಿಟಿಇ ಗುರುಗಳ ಷಷ್ಠ್ಯಬ್ದಿ ಸಂಭ್ರಮದ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಇಂದಿನ ತಂತ್ರಜ್ಞಾನ ಯುಗದಲ್ಲಿ ಗೂಗಲ್ ಸೇರಿದಂತೆ ವಿವಿಧ ಡಿಜಿಟಲ್ ಸಾಧನಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಆದರೂ, ಶೇ. 50ರಷ್ಟು ಮಕ್ಕಳು ಓದಲು ಮತ್ತು ಬರೆಯಲು ಸಾಧ್ಯವಾಗದಿರುವುದು ಕಳವಳಕಾರಿ ಸಂಗತಿಯಾಗಿದೆ. ಕಳೆದ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಇದೇ ರೀತಿಯಲ್ಲಿ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಗುರಿಯನ್ನು ಶಿಕ್ಷಕರು ಹೊಂದಬೇಕು ಎಂದು ಕರೆ ನೀಡಿದರು.ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಿ, ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಶಿಕ್ಷಕರಿಗೆ ಯಾವುದೇ ಸಮಸ್ಯೆ ಅಥವಾ ತೊಂದರೆ ಎದುರಾದಲ್ಲಿ ನೇರವಾಗಿ ತಮ್ಮ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಗಳನ್ನು ತಿಳಿಸಬಹುದು. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ, ಸಿದ್ದು ಹುಲ್ಲೋಳಿ, 1964-65ರಲ್ಲಿ ಸಿಟಿಇ ಆರಂಭವಾಗಿದ್ದು, ನಾಲ್ಕು ವರ್ಷಗಳ ಬಳಿಕ ಜಿ.ಜಿ. ಪ್ರೌಢಶಾಲೆ ಪ್ರಾರಂಭವಾಯಿತು. ರಾಜ್ಯದಲ್ಲಿ ಆರು ಸಿಟಿಇಗಳಿದ್ದರೂ, ಅವುಗಳಲ್ಲಿ ಜಮಖಂಡಿ ಸಿಟಿಇ ವಜ್ರ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 


ಸುದ್ದಿ ಓದಿ