ಸಂಗಾಪುರ ದುರ್ಗಾದೇವಿ ಜಾತ್ರೆಯಲ್ಲಿ ಸಚಿವ ಎಂ.ಬಿ. ಪಾಟೀಲ ಭಾಗಿ
ವಿಜಯಪುರ 21 : ಹಲವು ವರ್ಷಗಳ ನಂತರ ಇಲ್ಲಿನ ದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಮಂಗಳವಾರ ರಾತ್ರಿ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ನಡೆದ ಗ್ರಾಮ ದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಅವರು, ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತಮಾಡಿರು.
ಸೂಪರ್ ಎಲ್ ನಿನೊಂದಿಂದಾಗಿ ಎಲ್ಲಡೆ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿ ಎದುರಾಗಿದೆ. ಆದರೆ, ಜಿಲ್ಲೆಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ನಮ್ಮಲ್ಲಿ ನೀರಿನ ಸಮಸ್ಯೆ ಸಾಕಷ್ಟು ನಿವಾರಣೆಯಾಗಿದೆ. ಎಲ್ಲರೂ ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ. ದೇವಿ ಎಲ್ಲರಿಗೂ ಆಶೀರ್ವದಿಸಿ, ಬರ ನೀಗಿಸಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲು ದಳವಾಯಿ, ಜಿ. ಪಂ. ಮಾಜಿ ಸದಸ್ಯ ಮುತ್ತಪ್ಪ ಶಿವಣ್ಣವರ, ತಾ. ಪಂ. ಮಾಜಿ ಸದಸ್ಯ ರಮೇಶ ಬಡ್ರಿ, ಮುಖಂಡರಾದ ಮುತ್ತು ಮಾದರ, ಶಿವಪ್ಪ ಪೂಜಾರಿ, ಅಶೋಕ ಮಾದರ, ರಾಮನಿಂಗ ಕೊಕಟನೂರ ಮುಂತಾದವರು ಉಪಸ್ಥಿತರಿದ್ದರು.