ರಾಜ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.0 ತೀವ್ರತೆಯ ಭೂಕಂಪ ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.0 ತೀವ್ರತೆಯ ಭೂಕಂಪ ದಾಖಲು

ಬೆಂಗಳೂರು, ಅ. 23 : ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ, ಶುಕ್ರವಾರ ಬೆಳಿಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.

ಅಕ್ಟೋಬರ್ 23ರಂದು ಬೆಳಿಗ್ಗೆ 9.01 ಗಂಟೆಗೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು ತಿಮ್ಮೋಜನಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು 0.5 ಕಿ.ಮೀ. ದೂರದಲ್ಲಿ, ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ. ಆಳದಲ್ಲಿತ್ತು ಎಂದು ಕೇಂದ್ರ ತಿಳಿಸಿದೆ.

ಭೂಕಂಪದ ಕಂಪನಗಳು ಕೇಂದ್ರಬಿಂದುವಿನಿಂದ 20ರಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಅನುಭವಕ್ಕೆ ಬಂದಿರುವ ಸಾಧ್ಯತೆಯಿದೆ. ಭೂಕಂಪದ ತೀವ್ರತೆ ಕಡಿಮೆಯಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಸ್ಪಷ್ಟಪಡಿಸಿದೆ.

ಈ ಭೂಕಂಪದಿಂದ ಯಾವುದೇ ಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ಅಧಿಕೃತವಾಗಿ ದೃಢಪಟ್ಟ ಮಾಹಿತಿ ಲಭ್ಯವಾಗಿಲ್ಲ.

ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಅಧಿಕೃತ ಸಂಸ್ಥೆಗಳು ನೀಡುವ ಮಾಹಿತಿಯನ್ನೇ ನಂಬಬೇಕು ಎಂದು ಕೇಂದ್ರ ಮನವಿ ಮಾಡಿದೆ.

ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಒಳಾಂಗಣದಲ್ಲಿರುವವರು ಗಟ್ಟಿಮುಟ್ಟಾದ ಮೇಜಿನ ಕೆಳಗೆ ಆಶ್ರಯ ಪಡೆದು, ತಲೆ ಮತ್ತು ಕುತ್ತಿಗೆಯನ್ನು ರಕ್ಷಿಸಿಕೊಳ್ಳಬೇಕು. ಕಿಟಕಿಗಳು, ಗಾಜು ಹಾಗೂ ಮೇಲಿನಿಂದ ಬೀಳುವ ಸಾಧ್ಯತೆಯಿರುವ ವಸ್ತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದೆ.

ಹೊರಾಂಗಣದಲ್ಲಿರುವವರು ಕಟ್ಟಡಗಳು, ವಿದ್ಯುತ್ ಕಂಬಗಳು ಮತ್ತು ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿಗಳಿಂದ ದೂರವಿದ್ದು, ತೆರೆದ ಪ್ರದೇಶಗಳಿಗೆ ತೆರಳಬೇಕು ಎಂದು ಕೇಂದ್ರ ಸೂಚಿಸಿದೆ.

ಸುದ್ದಿ ಓದಿ