ಏಕಲಮಟ್ಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ರೈತರ ರಸ್ತೆ ತಡೆ ಪ್ರತಿಭಟನೆ
ಲೋಕದರ್ಶನ ವರದಿ
ಜಮಖಂಡಿ 28 : ಕಳೆದ 14 ವರ್ಷದಿಂದ ಪೂರ್ಣಗೊಳ್ಳದ ಏಕಲಮಟ್ಟಿ ಏತನೀರಾವರಿ ಯೋಜನೆಗೆ ಕಾಯಕಲ್ಪವಾಗಬೇಕು ಎಂದು ತಾಲೂಕಿನ ಚಿಕ್ಕಲಕಿ ಗ್ರಾಮದ ಸುತ್ತಮೂತ್ತಲಿನ ರೈತರು ಕಳೆದ ಮೂರು ತಿಂಗಳಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದು. ತಾಲೂಕಿನ ಚಿಕ್ಕಲಕಿ ಕ್ರಾಸ್ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಿದರು.
2012-13 ರಲ್ಲಿ ಸುಮಾರು 48 ಕೋಟಿ ರೂಗಳ ಅನುದಾನದಲ್ಲಿ ಅಂದಿನ ಮುಖ್ಯಮಂತ್ರಿ ಇಂದಿನ ಸಂಸದ ಜಗದೀಶ ಶೆಟ್ಟರ ಶಂಕು ಸ್ಥಾಪನೆ ನೆರವೇರಿಸಿದ್ದರು. ಅದು ಇಲ್ಲಿಯವರೆಗೆ ಪೂರ್ಣವಾಗದೆ ರೈತರ ಪಾಲಿಗೆ ನುಂಗಲಾಗದ ಸಂಗತಿಯಾಗಿದೆ. ಈ ಏಕಲಮಟ್ಟಿ ಏತ ನೀರಾವರಿಯಿಂದ ತೊದಲಬಾಗಿ ಚಿಕ್ಕಲಕಿ, ಜನವಾಡ, ಅರ್ಜುಣಗಿ ನಾಲ್ಕು ಗ್ರಾಮಗಳು ಸೇರಿ ಸುಮಾರು 5000 ಎಕರೆ ಜಮೀನಿಗೆ ನೀರಾವರಿ ಲಭ್ಯವಾಗುತ್ತಿತ್ತು. ಆದರೆ ಅಲ್ಲಿಂದ ಇಲ್ಲಿವರೆಗೆ ಒಂದು ಹನಿಯೂ ಕೂಡಾ ರೈತರ ಪಾಲಿಗೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.