ಎಲ್ಲ ಸಮಾಜದ ಜನರು ಒಗ್ಗಟ್ಟಿನಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಬೇಕು: ಮಾಜಿ ಶಾಸಕ ಆನಂದ ನ್ಯಾಮಗೌಡ
ಲೋಕದರ್ಶನ ವರದಿ
ಜಮಖಂಡಿ 27: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯ ಮಹಾಪುರುಷರ ಜಯಂತಿಗಳನ್ನು ಯಾವುದೇ ಒಂದು ಜಾತಿ ಅಥವಾ ಸಮಾಜಕ್ಕೆ ಸೀಮಿತಗೊಳಿಸದೆ, ಎಲ್ಲ ಸಮಾಜದ ಜನರು ಒಗ್ಗಟ್ಟಿನಿಂದ ಆಚರಿಸಬೇಕು ಎಂದು ಮಾಜಿ ಶಾಸಕ ಆನಮಂದ ನ್ಯಾಮಗೌಡ ಹೇಳಿದರು.
ನಗರದ ತಹಶೀಲ್ದಾರರ ಕಚೇರಿ ಸಭಾಭವನದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.
ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ, ಡಾ. ಬಿ.ಆರ್. ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಸಂಗೊಳ್ಳಿ ರಾಯಣ್ಣ ಅವರಂತಹ ಮಹನೀಯರ ಆದರ್ಶಗಳು ಯುವಜನತೆಗೆ ಸ್ಫೂರ್ತಿಯಾಗಬೇಕು. ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ರೈತ ಮುಖಂಡ ಬಿ.ಎಸ್. ಸಿಂದೂರ ಹಾಗೂ ಬಿಸನಾಳ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಒಂದು ಸಮಾಜಕ್ಕೆ ಮಾತ್ರ ಸೀಮಿತವಾದ ಮಹಾನ್ ವ್ಯಕ್ತಿಗಳಲ್ಲ. ಅವರು ಇಡೀ ಮಾನವಕುಲಕ್ಕೆ ಧರ್ಮ, ನ್ಯಾಯ, ನೈತಿಕತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಋಷಿಗಳಾಗಿದ್ದಾರೆ. ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣವು ಮಾನವ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮಹಾಕಾವ್ಯವಾಗಿದೆ. ಶ್ರೀರಾಮಚಂದ್ರರ ಆದರ್ಶಗಳು ಹಾಗೂ ವಾಲ್ಮೀಕಿಯವರ ತತ್ವಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.