ಬೆಳಗಾವಿ ಕಾರಂಜಿಮಠದ 27ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನ. 2ರಿಂದ 7ರವರೆಗೆ ಪ್ರವಚನ ಮಾಲಿಕೆನಿಜಗುಣ ಶಿವಯೋಗಿಗಳು ಸೇರಿದಂತೆ ಐವರು ಶರಣರ ಜೀವನ-ಸಾಧನೆ ಕುರಿತು ಪ್ರವಚನ
ಬೆಳಗಾವಿ 27 : ನಗರದ ಶಿವಬಸವನಗರದಲ್ಲಿರುವ ಶ್ರೀ ಕಾರಂಜಿಮಠದ 27ನೇ ವಾರ್ಷಿಕೋತ್ಸವದ ಅಂಗವಾಗಿ ನ. 2 ರಿಂದ 7ರವರೆಗೆ ಪ್ರವಚನ ಮಾಲಿಕೆ ಹಾಗೂ ನವೆಂಬರ್ 7ರಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.ಕಾರಂಜಿಮಠದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿಡಸೋಸಿಯ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಶ್ರೀಮನ್ನಿರಂಜನ ಜಗದ್ಗುರು ಡಾ. ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಬೆಳಗಾವಿ ನಾಗನೂರಿನ ರುದ್ರಾಕ್ಷಿಮಠದ ಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹುಬ್ಬಳ್ಳಿ-ವಿಜಯಪುರದ ಶ್ರೀ ಶಾಂತಾಶ್ರಮದ ಶ್ರೀ ಷೋ.ಬ್ರ. ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದು, ‘ಶ್ರೀ ನಿಜಗುಣ ಶಿವಯೋಗಿಗಳು’ ವಿಷಯದೊಂದಿಗೆ ನವೆಂಬರ್ 2ರಂದು ಸೋಮವಾರ ಸಂಜೆ 6ರಿಂದ 7.30ರವರೆಗೆ ಪ್ರವಚನ ಮಾಲಿಕೆಗೆ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ ಉಖಾನಾಪುರದ ಶ್ರೀ ಮರುಳಸಿದ್ಧೇಶ್ವರ ಬೃಹನ್ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಠ್ಯಬ್ದಿ ಗೌರವ ಕಾರ್ಯಕ್ರಮ ನಡೆಯಲಿದೆ.
ಕಾರಂಜಿಮಠದ ಪೂಜ್ಯ ಡಾ. ಶಿವಯೋಗಿ ದೇವರು ಸಮ್ಮುಖ ವಹಿಸಲಿದ್ದು, ಕೆಎಲ್‌ಇ ಸಂಸ್ಥೆಯ ಪೂರ್ವ ಕಾರ್ಯದರ್ಶಿ ಡಾ. ಎಫ್.ವಿ. ಮಾನ್ವಿ ಅವರನ್ನು ಗೌರವಿಸಲಾಗುವುದು.ನವೆಂಬರ್ 3ರಂದು ಉಪ್ಪಿನ ಬೆಟಗೇರಿಯ ಜಗದ್ಗುರು ಮೂರುಸಾವಿರ ಶಾಖಾಮಠದ ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ‘ಶ್ರೀ ಮೈಲಾರ ಬಸವಲಿಂಗ ಶರಣರು ’ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ. ನವೆಂಬರ್ 4ರಂದು ಘೋಡಗೇರಿಯ ಶ್ರೀ ಶಿವಾನಂದಮಠದ ಶ್ರೀ ಷೋ.ಬ್ರ. ಮಲ್ಲಯ್ಯ ಮಹಾಸ್ವಾಮಿಗಳು ‘ ಶ್ರೀ ಸರೂ್ಭಷಣ ಶಿವಯೋಗಿಗಳು’ ವಿಷಯವನ್ನು ನಿರೂಪಿಸಲಿದ್ದಾರೆ.
ನವೆಂಬರ್ 5ರಂದು ಬಸವಬೆಳವಿಯ ಶ್ರೀ ಚರಂತೇಶ್ವರಮಠದ ಪೂಜ್ಯ ಶ್ರೀ ಶರಣಬಸವ ದೇವರು ‘ ಶ್ರೀ ಘನಮಠ ಶಿವಯೋಗಿಗಳು ’ ಕುರಿತು ಪ್ರವಚನ ನೀಡಲಿದ್ದಾರೆ. ನವೆಂಬರ್ 6ರಂದು ಶೇಗುಣಸಿಯ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಡಾ. ಮಹಾಂತಪ್ರಭು ಮಹಾಸ್ವಾಮಿಗಳು ‘ ಶ್ರೀ ಕಡಕೋಳ ಮಡಿವಾಳ ಶಿವಯೋಗಿಗಳು’ ವಿಷಯದ ಕುರಿತು ಪ್ರವಚನ ನಡೆಸಿಕೊಡಲಿದ್ದಾರೆ.ನವೆಂಬರ್ 7ರಂದು ಶನಿವಾರ ಸಂಜೆ 6 ಗಂಟೆಗೆ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.