ಸ್ವಾತಂತ್ರ್ಯ ಹೋರಾಟದ ಇತಿಹಾಸ ದಾಖಲಿಸುವುದು ಮಹತ್ವದ ಕಾರ್ಯ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಲೋಕದರ್ಶನ ವರದಿ
ವಿಜಯಪುರ 27 : ಅವಿಭಜಿತ ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ಇತಿಹಾಸ, ಹೋರಾಟಗಾರರ ಕೊಡುಗೆ ಹಾಗೂ ಅಂದಿನ ಚಳವಳಿಗಳ ಸ್ವರೂಪವನ್ನು ಸಮಗ್ರವಾಗಿ ಪರಿಚಯಿಸುವ ‘ಅವಿಭಜಿತ ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ’ ಗ್ರಂಥವು ಸೋಮವಾರ ನಗರದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಲೋಕಾರೆ್ಣಗೊಂಡಿತು.
ಕಲಬುರಗಿಯ ಪಾಲಿ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಗ್ರಂಥವನ್ನು ಲೋಕಾರೆ್ಣಗೊಳಿಸಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ದಾಖಲಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಂದು ಜಿಲ್ಲೆಯೂ ತನ್ನದೇ ಆದ ಕೊಡುಗೆ ನೀಡಿದೆ.
ಆಯಾ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಸ್ಥಳೀಯ ಚಳವಳಿಗಳು ಹಾಗೂ ಅಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯನ್ನು ಆಧರಿಸಿ ಇಂತಹ ಸಂಶೋಧನಾತ್ಮಕ ಗ್ರಂಥಗಳನ್ನು ರೂಪಿಸಿದ್ದಾರೆ ಎಂದು ಹೇಳಿದರು. ಇದು ಉಳಿದ ಸಂಶೋಧಕರಿಗೆ ಮಾರ್ಗದರ್ಶನವಾಗಿದೆ.
ಈ ಕೃತಿಯ ರಚನೆಗಾಗಿ ಲೇಖಕ ದಿವಂಗತ ಜಿ.ಎ. ಬಿರಾದಾರ ಅವರು ಬಾಂಬೆ, ದೆಹಲಿ ಮತ್ತು ಬೆಂಗಳೂರ ಕೇಂದ್ರದ ಪತ್ರಾಗಾರ ಸೇರಿದಂತೆ ವಿವಿಧ ದಾಖಲೆ ಸಂಗ್ರಹಾಲಯಗಳನ್ನು ಹಾಗೂ ಅವಿಭಜಿತ ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲೆಯ ತಾಲೂಕುವಾರು ಸ್ಥಳೀಯ ಇತಿಹಾಸ,
ಸ್ವಾತಂತ್ರ್ಯ ಹೋರಾಟಗಾರರ ಚಟುವಟಿಕೆಗಳು, ಸಮುದಾಯಗಳ ಹೋರಾಟ ಹಾಗೂ ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಸುಸಂಬದ್ಧವಾಗಿ ನಿರೂಪಿಸಿರುವುದು ಕೃತಿಯ ವಿಶೇಷತೆಯಾಗಿದೆ.ದಾಖಲೆಗಳ ಆಧಾರದಲ್ಲಿ ಇಂತಹ ಕೃತಿಯನ್ನು ರಚಿಸಿರುವುದು ಅಪರೂಪದ ಸಾಧನೆಯಾಗಿದೆ ಎಂದರು.