ಬಳ್ಳಾರಿ

ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ‘ಸುರಕ್ಷಿತ ಬಚಪನ್ ಅಭಿಯಾನ’: ಪೋಕ್ಸೊ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ‘ಸುರಕ್ಷಿತ ಬಚಪನ್ ಅಭಿಯಾನ’: ಪೋಕ್ಸೊ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 

                ಮಕ್ಕಳ ಸಮಗ್ರ ವಿಕಾಸದಿಂದಷ್ಟೇ ದೇಶದ ಅಭಿವೃದ್ಧಿ ಸಾಧ್ಯ: ನ್ಯಾ.ನಾಗೇಶ್ ನಾಯಕ್ 

ಬಳ್ಳಾರಿ 31: ದೇಶದ ಭವಿಷ್ಯ ಮತ್ತು ವರ್ತಮಾನದ ನಿಜವಾದ ಸಂಪತ್ತು ಮಕ್ಕಳು. ಪ್ರತಿಯೊಬ್ಬ ಮಗುವಿಗೆ ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಹಕ್ಕು ಸಿಕ್ಕಾಗ ಮಾತ್ರ ದೇಶ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಳ್ಳಾರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸಿ.ಜೆ.ಎಮ್ ಆದ ನಾಗೇಶ್ ನಾಯಕ್ ಅವರು ಹೇಳಿದರು. 

ಶುಕ್ರವಾರ, ಇಲ್ಲಿನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತ ಆಶ್ರಯದಲ್ಲಿ ‘ಸುರಕ್ಷಿತ ಬಚಪನ್ ಅಭಿಯಾನ’ದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪೋಕ್ಸೊ ಕಾಯ್ದೆ-2012ರ ಕುರಿತು ವಿಶೇಷ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆ ಹಾಗೂ ಲೈಂಗಿಕ ಶೋಷಣೆಯಂತಹ ಪಿಡುಗುಗಳನ್ನು ತಡೆಯಲು ಕೇವಲ ಪೊಲೀಸ್ ಅಥವಾ ನ್ಯಾಯಾಂಗ ಇಲಾಖೆ ಮಾತ್ರವಲ್ಲದೆ, ಇಡೀ ಸಮಾಜ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು. 

ಶಾಲೆಯಲ್ಲಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಾಗಲಿ ಯಾರಾದರೂ ಅಪರಿಚಿತರು ಅಥವಾ ಪರಿಚಿತರು ಅಸಹಜವಾಗಿ ವರ್ತಿಸಿದರೆ, ಮಕ್ಕಳು ಮುಚ್ಚಿಡದೆ ತಕ್ಷಣವೇ ಶಿಕ್ಷಕರು, ಪೋಷಕರು ಅಥವಾ ಆಪ್ತರ ಗಮನಕ್ಕೆ ತರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌. ಹೊಸಮನೆ ಅವರು ಮಾತನಾಡಿ, ತಂತ್ರಜ್ಞಾನ ಹಾಗೂ ಎಐ ಸೌಲಭ್ಯಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕೆ ವಿನಃ ನಮ್ಮ ಸ್ವಂತ ಯೋಚನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಕಳೆದುಕೊಳ್ಳಬಾರದು. ಮಾನವನ ಮೆದುಳಿನ ಆಲೋಚನಾ ಶಕ್ತಿಯೇ ಎಲ್ಲ ತಂತ್ರಜ್ಞಾನಕ್ಕಿಂತ ಮಿಗಿಲಾದುದು, ಅದನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ಮಕ್ಕಳಿಗೆ ಸುರಕ್ಷತೆ ಮನೆಯಿಂದಲೇ ಆರಂಭವಾಗಿ ಶಾಲೆ ಮತ್ತು ಸಮಾಜದಲ್ಲಿ ಮುಂದುವರಿಯಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕಿರುಕುಳದ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಯಲು ಪೋಷಕರು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸದಾ ಜಾಗರೂಕರಾಗಿರಬೇಕು ಎಂದರು. 

ದೇಶದ ನಿಜವಾದ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ದೇಶದ ಪ್ರಜೆಗಳು ಮತ್ತು ಮಕ್ಕಳ ಆರೋಗ್ಯಕರ ಹಾಗೂ ಸುರಕ್ಷಿತ ಬೆಳವಣಿಗೆಯಲ್ಲಿದೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸುರಕ್ಷತೆ ಮತ್ತು ಸಮಾನ ಅವಕಾಶಗಳು ದೊರಕಬೇಕು ಎಂದು ಒತ್ತಿ ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಪುಷ್ಪಲತಾ ಎಮ್‌. ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಮಕ್ಕಳಿಗೆ ಪೋಕ್ಸೊ ಕಾನೂನಿನ ಮಹತ್ವ, ಸುರಕ್ಷತೆ, ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಡಿ.ವೈ.ಎಸ್‌.ಪಿ ಹಾಗೂ ವಿಶೇಷ ಮಕ್ಕಳ ಪೊಲೀಸ್ ಘಟಕದ ಅಧಿಕಾರಿ ಗೋವಿಂದರಾಜು, ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಸ್ತೂರಿ ಡಿ., ಬಾಲನ್ಯಾಯ ಮಂಡಳಿಯ ಸದಸ್ಯರಾದ ಅನುರಾಧ ಮತ್ತು ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ