ಮಗುವಿನ ಹೊಟ್ಟೆಯೊಳಗೆ ಭ್ರೂಣ: ಬಳ್ಳಾರಿ ಬಿಎಂಸಿಆರ್‌ಸಿ ಯಲ್ಲಿ ಎರಡು ತಿಂಗಳ ಕಂದಮ್ಮನಿಗೆ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
ಲೋಕದರ್ಶನ ವರದಿ
ಬಳ್ಳಾರಿ,ಅ.29: ನಗರದ ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡವು ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಮಗುವಿಗೆ ಮರುಜನ್ಮ ನೀಡಿದೆ. ವೈದ್ಯಕೀಯ ಲೋಕದಲ್ಲಿ ಅತ್ಯಂತ ಅಪರೂಪ ಎನಿಸಿಕೊಂಡಿರುವ ‘ಫೀಟಸ್ ಇನ್ ಫೀಟು’ ಪ್ರಕರಣ ಇದಾಗಿದೆ.
*ಗರ್ಭಾವಸ್ಥೆಯಲ್ಲೇ ಪತ್ತೆ:*
ಮಗು ಗರ್ಭದಲ್ಲಿದ್ದಾಗಲೇ ಬಿಎಂಸಿಆರ್‌ಸಿ ಯ ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ ಅವರ ನೇತೃತ್ವದ ತಂಡವು ಈ ಅಪರೂಪದ ಸಮಸ್ಯೆಯನ್ನು ಪತ್ತೆಹಚ್ಚಿತ್ತು. ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಜನನದ ನಂತರ ಅಗತ್ಯ ತಪಾಸಣೆಗಳನ್ನು ನಡೆಸಿ, ನಿಖರ ಯೋಜನೆಯೊಂದಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಲಾಗಿದೆ.
ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ನಡೆದ ಈ ಸಂಕೀರ್ಣ ಕಾರ್ಯಾಚರಣೆಯಲ್ಲಿ ಡಾ. ಸಂಜೀವ್ ಜೋಶಿ, ಡಾ. ರಾಮ್ ಮೋಹನ್ ಮತ್ತು ಡಾ. ಅಶ್ವಿತಾ ಭಾಗವಹಿಸಿದ್ದರು. ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಹ್ಮಣ್ಯ, ಡಾ. ಪರಿಮಳಾ, ಡಾ. ನಿಜಾಮುದ್ದೀನ್, ಡಾ. ರಘುನಾಥ್, ಡಾ. ಮಧುಶ್ರೀ ಹಾಗೂ ಶುಶ್ರೂಷಕರಾದ ಪುಷ್ಪಲತಾ ಮತ್ತು ಸಲೀಂ ಪಾಷಾ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿ ಸಹಕರಿಸಿದೆ.
*ಏನಿದು ‘ಫೀಟಸ್ ಇನ್ ಫೀಟು’?:*
ವೈದ್ಯಕೀಯ ವಿಜ್ಞಾನದ ಪ್ರಕಾರ, ಇದು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೊಂದದ ಅವಳಿ ಭ್ರೂಣವು ಇನ್ನೊಂದು ಮಗುವಿನ ದೇಹದೊಳಗೆ ಸೇರಿಕೊಳ್ಳುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿ. ಸುಮಾರು ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಮಾತ್ರ ಇಂತಹ ಪ್ರಕರಣಗಳು ಕಂಡುಬರುತ್ತವೆ. ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ.
ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಸುಧಾರಿತ ಮಕ್ಕಳ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದು, 2008ರಲ್ಲೂ ಇಂತಹುದೇ ಪ್ರಕರಣವನ್ನು ವಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮರಿರಾಜ್, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಎಂ., ವೈದ್ಯಕೀಯ ಅಧೀಕ್ಷಕ ಡಾ. ಅರುಣ್, ಮುಖ್ಯ ಆಡಳಿತಾಧಿಕಾರಿ ಡಾ. ನಯನಾ ಹಾಗೂ ಹಣಕಾಸು ಸಲಹೆಗಾರ ಮಹೇಶ್ ಅವರ ನಿರಂತರ ಬೆಂಬಲಕ್ಕೆ ವೈದ್ಯರ ತಂಡ ಕೃತಜ್ಞತೆ ಸಲ್ಲಿಸಿದೆ.