ಪ್ರತಿಯೊಬ್ಬರೂ ತಂತ್ರಜ್ಞಾನದ ಸುರಕ್ಷತೆ ಮತ್ತು ಸದ್ಭಳಕೆಗೆ ಆದ್ಯತೆ ನೀಡಬೇಕು - ಅವ್ವಾರು ಮಂಜುನಾಥ್
ಬಳ್ಳಾರಿ, ಅ. 29: ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಬಳಕೆ ಎಷ್ಟು ಉಪಯೋಗ ಆಗಿದೆಯೋ, ಅಷ್ಟೇ ಪ್ರಮಾಣದಲ್ಲಿ ದುರ್ಬಗಳಕೆ ಆಗುತ್ತಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ಬಿಡಿಸಿಸಿಐ ಆಡಿಟೋರಿಯಂನಲ್ಲಿ ನಡೆದ ‘ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಜಾಗೃತಿ’ ಶಿಬಿರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹಣಕ್ಕಾಗಿ, ಮಾಹಿತಿಗಾಗಿ, ಅಧಿಕಾರಕ್ಕಾಗಿ, ಪ್ರಚಾರಕ್ಕಾಗಿ, ನಾನಾ ಕಾರಣಗಳಿಗಾಗಿ ತಂತ್ರಜ್ಞಾನದ ಬಳಕೆ - ದುರ್ಬಳಕೆ ಆಗುತ್ತಿದೆ. ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ - ಅಗತ್ಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಡಿಜಿಟಲ್ ಸುರಕ್ಷತೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯವಾಗಿದೆ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ವ್ಯಾಪಾರಿಗಳು, ಉದ್ಯಮಿಗಳು, ಸಾರ್ವಜನಿಕರು ಮತ್ತು ಯುವ ಸಮೂಹದಲ್ಲಿ ಡಿಜಿಟಲ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿರುವ ಗೃಹ ಇಲಾಖೆಯ ಕ್ರೈಂ ಬ್ರ್ಯಂಚ್ನ ಡಿಸಿಪಿ ಆರ್.ಐ. ಖಾಸಿಂ ಅವರು, ಶಿಕ್ಷಿತರಲ್ಲೇ ಹೆಚ್ಚಿನ ಪ್ರಮಾಣದ ವಂಚನೆಗಳು ನಡೆಯುತ್ತಿವೆ. ವಂಚಕರೂ ಹೆಚ್ಚಿನ ಸಂಖ್ಯೆಯಲ್ಲಿ ಸುಶಿಕ್ಷಿತರು. ವಂಚನೆಗೆ ಒಳಗಾಗುವವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸುಶಿಕ್ಷಿತರು - ಶಿಕ್ಷಣ ಪಡೆದವರು ಆಗಿದ್ದಾರೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹೈದರಾಬಾದ್ನ ಸಿಎ ಡಿ.ಪ್ರೇಮನಾಥ್ ಅವರು, ಡಿಜಿಟಲ್ ಸುರಕ್ಷತೆಗಾಗಿ ಡಿಪಿಡಿಪಿ ಕಾಯ್ದೆ ಜಾರಿಯಾಗಿದ್ದು, ಪ್ರತ್ಯೇಕ ಮಂಡಳಿ ರಚನೆಯಾಗುತ್ತಿದೆ.
ಸಾರ್ವಜನಿಕರಿಗೆ ಡಿಜಿಟಲ್ ಸುರಕ್ಷತೆ ಒದಗಿಸಲು ಕೇಂದ್ರ ಸರ್ಕಾರ ಸೂಕ್ತ ಕಾಯ್ದೆಯನ್ನು ರೂಪಿಸಿದ್ದು, ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಚಾರ್ಟೆಡ್ ಅಕೌಂಟೆಂಟ್ಗಳಿಗೂ ಡಿಜಿಟಲ್ ಸುರಕ್ಷತೆಯ ಕುರಿತು ಸೂಕ್ತ ತರಬೇತಿ ನೀಡಲಾಗುತ್ತಿದೆ ಎಂದರು. ನಗರದ ಡಿವೈಎಸ್ಪಿ ಗೋವಿಂದರಾಜು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತಾ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ಯಾಕ್ಸೇಷನ್ ಕಮಿಟಿ ಚೇರ್ಮೆನ್ ಸಿಎ ಕೆ. ರಾಜಶೇಖರ್ ಅವರು, ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿ, ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ವಂದನಾರೆ್ಣ ಸಲ್ಲಿಸಿದರು.