ಸಿ. ಪಿ. ಡಿ. ಆರ್. ಎಸ್ ವತಿಯಿಂದ ಅ.31ರಂದು ಬೆಂಗಳೂರಿನಲ್ಲಿ ರಾಜ್ಯ ಸಮಾವೇಶ
ಬಳ್ಳಾರಿ. ಅ. 28 : ಮಾನವ ಹಕ್ಕುಗಳು, ಪ್ರಜಾಪ್ರಭುತ್ವದ ಹಕ್ಕುಗಳು ಹಾಗೂ ಧರ್ಮನಿರಪೇಕ್ಷತೆಯ ರಕ್ಷಣೆಯ ಉದ್ದೇಶದಿಂದ ಸೆಂಟರ್ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ ಅಂಡ್ ಸೆಕ್ಯುಲಾರಿಸಂ ಸಂಘಟನೆಯ ವತಿಯಿಂದ ಅಕ್ಟೋಬರ್ 31ರಂದು ಬೆಂಗಳೂರಿನಲ್ಲಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಆರ್ ಸೋಮಶೇಖರಗೌಡ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ , ಸಂಘಟನೆಯು ದೇಶಾದ್ಯಂತ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಹಾಗೂ ಧರ್ಮನಿರಪೇಕ್ಷತೆಯ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಚರ್ಚೆಗಳು, ವಿಚಾರ ಸಂಕಿರಣಗಳು ಮತ್ತು ವೆಬಿನಾರ್ಗಳನ್ನು ಆಯೋಜಿಸುತ್ತಾ ಬಂದಿದೆ,
ಇಂದಿನ ಸಂದರ್ಭದಲ್ಲಿ ಜನರ ಆಶೋತ್ತರಗಳು ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಅಂತರ ಹೆಚ್ಚಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸೌಲಭ್ಯಗಳು ಮಾರುಕಟ್ಟೆ ಸರಕುಗಳಾಗುತ್ತಿದ್ದು, ಜನಸಾಮಾನ್ಯರಿಗೆ ಅವುಗಳನ್ನು ಪಡೆಯುವುದು ಸವಾಲಾಗಿ ಪರಿಣಮಿಸುತ್ತಿದೆ. ಮಾನವ ಹಕ್ಕುಗಳು ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಸ್ವತಂತ್ರ ಸಂಸ್ಥೆಗಳ ಸ್ವಾಯತ್ತತೆಯ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.ಚುನಾವಣಾ ಪ್ರಕ್ರಿಯೆಯಲ್ಲಿ ಹಣಬಲ ಮತ್ತು ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂತಹ ಸನ್ನಿವೇಶದಲ್ಲಿ ಜನರಲ್ಲಿ ಸಂವಿಧಾನಾತ್ಮಕ ಮೌಲ್ಯಗಳು, ಮಾನವ ಹಕ್ಕುಗಳು ಹಾಗೂ ಜಾತ್ಯತೀತತೆಯ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.
ಈ ನಿಟ್ಟಿನಲ್ಲಿ ಸಂಘಟನೆಯು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜ್ಯ ಸಮಾವೇಶದ ಮೂಲಕ ಈ ವಿಚಾರಗಳ ಕುರಿತು ವ್ಯಾಪಕ ಚರ್ಚೆ ನಡೆಸಲು ಉದ್ದೇಶಿಸಿದೆ ಎಂದು ತಿಳಿಸಿದರು.ಅಕ್ಟೋಬರ್ 31ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮಾವೇಶದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನ ಕೈ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್. ಹಿರೇಮಠ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಸೋಮಶೇಖರಗೌಡ ಮಾಹಿತಿ ನೀಡಿದರು.ಪತ್ರಿಕಾ ಗೋಷ್ಠಿಯಲ್ಲಿ ಖೀಜಾರ್, ದೂದ್ ಪೀರ,ಸೇರದಂತೆ ಇತರರು ಉಪಸ್ಥಿತರಿದ್ದರು.