ಯುವಜನರು ಸಂವಿಧಾನದ ಅರಿವು ಹೊಂದಿ ನೀತಿ ನಿರೂಪಕರಾಗಿ ಹೊರಹೊಮ್ಮಲಿ: ಜಿಲ್ಲಾಧಿಕಾರಿ ಡಾ. ಆನಂದ ಕೆ.
ಲೋಕದರ್ಶನ ವರದಿ
ವಿಜಯಪುರ 29 : ಯುವಜನರು ಸಂವಿಧಾನದ ಆಶಯಗಳು, ಸಂಸದೀಯ ಕಾರ್ಯಕಲಾಪಗಳು ಹಾಗೂ ಕಾನೂನು ರಚನೆಯ ಪ್ರಕ್ರಿಯೆಯ ಬಗ್ಗೆ ಅರಿವು ಹೊಂದಿ, ಭವಿಷ್ಯದಲ್ಲಿ ಜವಾಬ್ದಾರಿಯುತ ನೀತಿ ನಿರೂಪಕರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸಂಸತ ಮೂಲಕ ಯುವಜನರಿಗೆ ಸಂಸತ್ತಿನ ಮತ್ತು ಶಾಸಕಾಂಗದ ಕಾರ್ಯವಿಧಾನ, ಪ್ರಶ್ನೋತ್ತರ ಕಲಾಪ, ಕಾನೂನುಗಳ ಮಂಡನೆ ಹಾಗೂ ಅವುಗಳ ಕುರಿತು ನಡೆಯುವ ಚರ್ಚೆಗಳ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ದೊರೆಯುತ್ತದೆ. ಯಾವುದೇ ವಿಷಯದ ಕುರಿತು ಚರ್ಚೆ ನಡೆಸುವಾಗ ನಿಗದಿತ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪಾಲನೆ ಸಂಸದೀಯ ವ್ಯವಸ್ಥೆಯ ಮಹತ್ವದ ಜವಾಬ್ದಾರಿಗಳ ಕುರಿತು ಅರಿವು ಹೊಂದಬಹುದಾಗಿದೆ ಎಂದರು.