ವಿಜಯಪುರ

ಗ್ರಂಥಾಲಯ ಮೇಲ್ವಿಚಾರಕರನ್ನು ಭಾರತ್ ಜೋಡೋ ಯುವಸಂಘದ ಜವಾಬ್ದಾರಿಯಿಂದ ಮುಕ್ತಗೊಳಿಸಲು ಮನವಿ

ಗ್ರಂಥಾಲಯ ಮೇಲ್ವಿಚಾರಕರನ್ನು ಭಾರತ್ ಜೋಡೋ ಯುವಸಂಘದ ಜವಾಬ್ದಾರಿಯಿಂದ ಮುಕ್ತಗೊಳಿಸಲು ಮನವಿ
Request to relieve the library supervisor from the responsibilities of the Bharat Jodo Youth Associa

ಲೋಕದರ್ಶನ ವರದಿ 

       ದೇವರಹಿಪ್ಪರಗಿ 28: ತಾಲೂಕಿನ ಅರಿವು ಕೇಂದ್ರಗಳ (ಗ್ರಾಮ ಪಂಚಾಯತಿ ಗ್ರಂಥಾಲಯ) ಮೇಲ್ವಿಚಾರಕರನ್ನು 'ಭಾರತ್ ಜೋಡೋ ಯುವಸಂಘ'ದ ಮೇಲ್ವಿಚಾರಕರನ್ನಾಗಿ ನೇಮಿಸಿರುವ ಆದೇಶವನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ, ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪದಾಧಿಕಾರಿಗಳು ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಇಒ) ಮನವಿ ಸಲ್ಲಿಸಿದರು. 

            ರಾಜ್ಯದ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಾಚರಿಸುತ್ತಿರುವ ಅರಿವು ಕೇಂದ್ರಗಳಲ್ಲಿ ಸಾಮಾನ್ಯವಾಗಿ ಒಬ್ಬರೇ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ, ಸಾರ್ವಜನಿಕರಿಗೆ ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಗ್ರಂಥಾಲಯ ಸೇವೆ ಒದಗಿಸುತ್ತಿದ್ದಾರೆ. 

           ಇಂತಹ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರನ್ನು ಭಾರತ್ ಜೋಡೋ ಯುವ ಸಂಘಗಳ ಹೆಚ್ಚುವರಿ ಜವಾಬ್ದಾರಿಗೆ ನೇಮಿಸಿದರೆ, ಗ್ರಂಥಾಲಯಕ್ಕೆ ಬರುವ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಅಲ್ಲದೆ, ಇದು ಸಾರ್ವಜನಿಕರ ಟೀಕೆಗೆ ಮತ್ತು ಅನಗತ್ಯ ವಾದ-ವಿವಾದಗಳಿಗೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ.

          ಎಂದು ಸಂಘದ ಮುಖಂಡರು ಕಳವಳ ವ್ಯಕ್ತಪಡಿಸಿದರು.  ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇತರ ಸರ್ಕಾರಿ ನೌಕರರನ್ನು ಈ ಕಾರ್ಯಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಅದೇ ಮಾದರಿಯಲ್ಲಿ ನಮ್ಮ ದೇವರಹಿಪ್ಪರಗಿ ತಾಲೂಕಿನಲ್ಲಿಯೂ ಸರ್ಕಾರಿ ನೌಕರರನ್ನು ನೇಮಿಸಿ, ಗ್ರಂಥಾಲಯ ಮೇಲ್ವಿಚಾರಕರನ್ನು ಈ ಹುದ್ದೆಯಿಂದ ಮುಕ್ತಗೊಳಿಸಬೇಕೆಂದು ಹೇಳಿದರು. 

            ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಎಡಿಪಿಆರ್  ಶಿವಾನಂದ ಮೂಲಿಮನಿ ಹಾಗೂ ಶಾಂತಗೌಡ ನ್ಯಾಮಣ್ಣನವರ ಅವರು ಸಂಘದ ಮನವಿಯನ್ನು ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಗೌರವಾಧ್ಯಕ್ಷ ಭೀಮಸಿಂಗ ರಾಠೋಡ,

            ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ ಉಕುಮನಾಳ, ತಾಲೂಕು ಪದಾಧಿಕಾರಿಗಳಾದ ರಮೇಶ ಕುಂಬಾರ, ರಾಮನಗೌಡ ಬಿರಾದಾರ, ಚನ್ನಪ್ಪ ಹಿರೇಕುರುಬರ, ಗಂಗಾಬಾಯಿ ಪಾಟೀಲ, ರೇಖಾ ಪಾಕಿ, ದಿಲಶಾದ ಇನಾಮದಾರ ಹಾಗೂ ಪರಸುರಾಮ ಶಿರಶ್ಯಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ