ಬಾಗಲಕೋಟೆ

ಜನತೆಗೆ ಬೇಡವಾದ ಕಾಂಗ್ರೆಸ್ ಸರ್ಕಾರ ತೊಲಗಲಿ : ತೇರದಾಳದ ಶಾಸಕ ಸಿದ್ದು ಸವದಿ

ಜನತೆಗೆ ಬೇಡವಾದ ಕಾಂಗ್ರೆಸ್ ಸರ್ಕಾರ ತೊಲಗಲಿ : ತೇರದಾಳದ ಶಾಸಕ ಸಿದ್ದು ಸವದಿ

ಲೋಕದರ್ಶನ ವರದಿ 


           ರಬಕವಿ-ಬನಹಟ್ಟಿ 06 : ಬಾಯಿ ಬಿಟ್ಟರೆ ಸುಳ್ಳುಗಳನ್ನು ಓತಪ್ರೋತವಾಗಿ ಹೇಳುವ ಸಿಎಂ. ರಾಜ್ಯದ ಜನತೆಯ ಕಲ್ಯಾಣ ಮರೆತು ತಮ್ಮ ಅಧಿಕಾರ ಲಾಲಸೆಯತ್ತ ಚಿತ್ತ ನೆಟ್ಟ ಕಾರಣ ಹಾಲು, ಮೊಸರು, ಬಸ್‌ಪ್ರಯಾಣ ದರಗಳನ್ನು ಹಿಂದೆಂದೂ ಕಂಡರಿಯದಷ್ಟು ಹೆಚ್ಚಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರು ಕನಿಷ್ಟ ನೆಮ್ಮದಿಯಿಂದ ಬದುಕಲೂ ಬಿಡದೇ ಆರ್ಥಿಕ ಹೊರೆ ಹೆಚ್ಚಿಸಿ, ಜನತೆ ನಿತ್ಯ ಇವರ ಉದಾಸೀನ ನಡೆಯಿಂದ ಹಿಡಿಶಾಪ ಹಾಕುತ್ತಿದ್ದಾರೆಂದು ಶಾಸಕ ಸಿದ್ದು ಸವದಿ ಕಿಡಿ ಕಾರಿದರು. 

           ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಕರ ಧನ ನೀಡಲು ಉದ್ದೇಶಿಸಿದ್ದರೆ, ಸರ್ಕಾರ ತನ್ನ ಖಜಾನೆಯಿಂದ ನೆರವು ನೀಡಬೇಕು. ಬಡವರ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ಪ್ರೋತ್ಸಾಹ ಧನ ನೀಡುವುದು ಅಸಮಂಜಸ ಕ್ರಮ. ಹಾಲು ರೂ.8, ಮೊಸರು ರು. 12 ದರ ಹೆಚ್ಚಳವಾಗಿದ್ದು, ಸಾಮಾನ್ಯ ಜನತೆ ಬೆಲೆ ಏರಿಕೆ ನೀತಿಯಿಂದ ಕಂಗಾಲಾಗಿದ್ದಾರೆ.

           ಸರ್ಕಾರದಲ್ಲಿ ಸಾಲ ಮಾಡುವ ಪದ್ಧತಿ ಹೆಚ್ಚುತ್ತಿದೆ. ಸಿದ್ಧರಾಮಯ್ಯ ಕಾಲದಲ್ಲಿ 5 ಲಕ್ಷ ಕೋಟಿ ಸಾಲ ಮಾಡಿದ್ದು, ಹಿಂದಿನ ಬೊಮ್ಮಾಯಿ ಸರ್ಕಾರ ಖಜಾನೆಯಲ್ಲಿರಿಸಿದ್ದ ರು.50 ಲಕ್ಷ ಕೋಟಿ ಹಣವೂ ಖಾಲಿಯಾಗಿದೆ. ಪ್ರಸ್ತುತ ಸಾಲದ ಹೊರೆ ಸುಮಾರು 8.5 ಲಕ್ಷ ಕೋಟಿಗೇರಿದೆ. ಜನತೆ ಕೇಳದ ಪಂಚ ಗ್ಯಾರಂಟಿ ಇದೀಗ ಜನತೆಗೆ ಪಂಚ್ ಗ್ಯಾರಂಟಿ ಎಂಬಂತಾಗಿದೆ. ಶಕ್ತಿ ಯೋಜನೆಯಿಂದಾಗಿ ಡಿಸೆಲ್ ಹಾಕಿಸಲೂ ದುಡ್ಡಿಲ್ಲವೆಂದು ಸಿಎಂ ಹೇಳುವುದು ಆಡಳಿತ ನಡೆಸಲು ಅವರ ಅಸಮರ್ಥತೆ ತೋರುತ್ತದೆ.

             ಕಬ್ಬಿಗೆ ಬೆಲೆ ನಿಗದಿಪಡಿಸಲು ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಳಗಾವಿಯಲ್ಲಿ ಸಭೆ ನಡೆಸಿ ಬೆಲೆ ನಿಗದಿಪಡಿಸದೇ ನಿರ್ಲಕ್ಷ್ಯ ವಹಿಸಿದ ಸರ್ಕಾರ ಇದೀಗ ರೈತ ಹೋರಾಟ ಹತ್ತಿಕ್ಕಲು 144 ಸೆಕ್ಷನ್ ಜಾರಿಗೊಳಿಸಿದ್ದಲ್ಲದೇ ರೈತ ಮುಖಂಡರನ್ನು ಬಂಧಿಸಿದೆ. ಸರ್ವಾಧಿಕಾರಿ ಧೋರಣೆಯ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯಾದ್ಯಂತ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ರಾಜ್ಯದ ವರಿಷ್ಠರು ನಿರ್ಧರಿಸಿದ್ದಾರೆ.

           ಬಿಎಸ್‌ವೈ ಸರ್ಕಾರದಲ್ಲಿ ಪ್ರತಿ ಎಕರೆಗೆ ರು.25 ಸಾವಿರ ಪರಿಹಾರ ನೀಡಲಾಗಿತ್ತು. ಆದರೆ ಈ ಸರ್ಕಾರ ರೈತರನ್ನು ಭಿಕ್ಷುಕರಂತೆ ಕಾಣುತ್ತ ಕೇವಲ ರು.2500 ಪರಿಹಾರ ಧನ ಘೋಷಿಸುವ ಮೂಲಕ ಅನ್ನದಾತನ ಅವಮಾನಿಸಿದೆ. ರೈತರಿಗೆ ಸಮರ​‍್ಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಕೇವಲ 3 ತಾಸು ವಿದ್ಯುತ್ ಪೂರೈಸಲಾಗುತ್ತಿರುವುದು ಅಂಧಾ ಸರ್ಕಾರ ಆಡಳಿತಕ್ಕೆ ಸಾಕ್ಷಿಯಾಗಿದೆ.  

           ಈ ಸಂದರ್ಭದಲ್ಲಿ ಮಾಜಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ, ರವಿಂದ್ರ ಕರ್ಲಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಚಿದಾನಂದ ಹೊರಟ್ಟಿ, ಅರುಣ ಬುದ್ನಿ, ಪ್ರವೀಣ ಧಬಾಡಿ, ಗೋವಿಂದ ಡಾಗಾ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ