ಬಾಗಲಕೋಟೆ

ರಬಕವಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

ರಬಕವಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

ಲೋಕದರ್ಶನ ವರದಿ 

          ರಬಕವಿ-ಬನಹಟ್ಟಿ 27: ಬರುವ ನವಂಬರ್ ಒಂದರಂದು ರಬಕವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ತಿಳಿಸಿದ್ದಾರೆ.

          ಅಂದು ಬೆಳಿಗ್ಗೆ 9:00 ಗಂಟೆಯಿಂದ ನಾಡದೇವಿ ಭುವನೇಶ್ವರಿ ತಾಯಿಯ ಭಾವಚಿತ್ರದ ಮೆರವಣಿಗೆಯು ಅಲಂಕೃತ ರಥದಲ್ಲಿ ಶಾಲಾ ಕಾಲೇಜು ಮಕ್ಕಳ ವೇಷ ಭೂಷಣ, ಡೊಳ್ಳು ಕುಣಿತ, ಗೊಂಬೆ ಕುಣಿತ, ಸಂಬಾಳ ವಾದನ, ಬ್ಯಾಂಡ್ ವಾದ್ಯ ಹಾಗೂ ವಿವಿಧ ಜಾನಪದ ಕಲಾವಾದ್ಯ ತಂಡಗಳೊಂದಿಗೆ ರಬಕವಿ ಹೊಸ ಬಸನಿಲ್ದಾಣ ಹತ್ತಿರ ಇರುವ ಎಂ. ವ್ಹಿ. ಪಟ್ಟಣ ಮಹಾವಿದ್ಯಾಲಯದಿಂದ ಹೊರಟು ಈಶ್ವರ್ ಸಣಕಲ್ ರಸ್ತೆ,

            ಹೊಸಪೇಟೆ ಲೇನ್ ಮಾರ್ಗವಾಗಿ ರಾಮಪುರದ ನೀಲಕಂಠೇಶ್ವರ ಮಠದವರೆಗೆ ಹೋಗಿ ಮರಳಿ ರಬಕವಿ ಶಂಕರಲಿಂಗ ಸರ್ಕಲ್‌ನಲ್ಲಿ  ಹಾಕಿರುವ ಭವ್ಯ ವೇದಿಕೆಯಲ್ಲಿ ಸಾಮೂಹಿಕ ನಾಡಗೀತೆ ಹಾಗೂ ಕಿರು ಸಭೆಯೊಂದಿಗೆ ಮುಕ್ತಾಯವಾಗುವುದು.  ಸಂಜೆ 6 ಗಂಟೆಗೆ ಶಂಕರಲಿಂಗ ಸರ್ಕಲ್‌ಲ್ಲಿ ಹಾಕಿರುವ ಭವ್ಯ ವೇದಿಕೆಯಲ್ಲಿ ಮಧುರ ಮಧುರವಿ ಮಂಜುಳಗಾನ ಸಂಗೀತ ಕಾರ್ಯಕ್ರಮ ಮತ್ತು ಸನ್ಮಾನ ಜರುಗಲಿದ್ದು.

             ಈ ಕಾರ್ಯಕ್ರಮದಲ್ಲಿ ಖ್ಯಾತ ಕಿರುತರೆ ನಟ ಜೂನಿಯರ್ ರವಿಚಂದ್ರನ್ ಹಾಗೂ ಪ್ರಸಿದ್ಧ ಸಂಗೀತ ಕಲಾವಿದರಿಂದ ಕನ್ನಡ ನಾಡಿನ ವೈಭವ ಸಿರಿ ಸಾರುವ ಭಾವಗೀತೆ ನಾಡಗೀತೆ, ಭಕ್ತಿ ಗೀತೆ, ಜಾನಪದ ಹಾಡು ಹಾಗೂ ಕನ್ನಡ ಚಲನಚಿತ್ರ ಗೀತೆಗಳ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಚಿದಾನಂದ ಸೊಲ್ಲಾಪುರ ತಿಳಿಸಿದ್ದಾರೆ. 


ಸುದ್ದಿ ಓದಿ