ತಾಲೂಕಾಡಳಿತದಿಂದ ಅದ್ದೂರಿ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 27: ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಭಾಷೆಯ ಪ್ರತೀಕವಾಗಿರುವ ರಾಜ್ಯೋತ್ಸವವನ್ನು ನ.1 ರಂದು ಎಲ್ಲರೂ ಒಟ್ಟಾಗಿ ಅದ್ದೂರಿಯಾಗಿ ಆಚರಿಸಬೇಕೆಂದು ಶಾಸಕ ಸವದಿ ಕರೆ ನೀಡಿದರು.
ತಹಶೀಲ್ದಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಕನ್ನಡಿಗರ ಹೆಮ್ಮೆಯ ಮತ್ತು ಸ್ವಾಭಿಮಾನದ ಪ್ರತೀಕವಾದ ಆಚರಣೆಯಲ್ಲಿ ಈ ಬಾರಿ ಇನ್ನೂ ವೈವಿಧ್ಯತೆ ಮೂಡಿಸೋಣ. ಸಂಭ್ರಮ, ಸಡಗರ ಮತ್ತು ಅರ್ಥಪೂರ್ಣವಾಗಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು,
ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು. ನಾಡಿನ ಏಕತೆ, ಸಮಗ್ರತೆ, ಅಭಿಮಾನ ಹಾಗೂ ಸಹೋದರತ್ವ ವೃದ್ಧಿಸುವ ಸಂದೇಶ ಸಾರುವ ಕಾರ್ಯಕ್ರಮಗಳನ್ನು ರೂಪಿಸಬೇಕು.
ಆಚರಣೆಯಲ್ಲಿ ಯಾವ ಲೋಪವಾಗದಂತೆ ಅಧಿಕಾರಿಗಳು ಗಮನಿಸಬೇಕು. ಸಂಘಟಕರು ಭಾಷೆಯ ಸಿರಿವಂತಿಕೆ ಮತ್ತು ಕನ್ನಡಿಗರ ಹೋರಾಟದ ಪರಂಪರೆಯನ್ನು ಬಿಂಬಿಸುವತ್ತ ಮುಂದಾಗಬೇಕೆಂದರು.
ತಹಶೀಲ್ದಾರ ಗೀರೀಶ ಸ್ವಾದಿ, ತಾಪಂ ಇಓ ಬಸವರಾಜ ಐನಾಪುರ, ಸದಾಶಿವ ಕುಂಬಾರ, ಚೇತನ ಭಜಂತ್ರಿ, ಚಿದಾನಂದ ಸೊಲ್ಲಾಪುರ, ಶಿವಾನಂದ ಬಾಗಲಕೋಟಮಠ, ತಾಲೂಕು ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ, ವಿಜಯಕುಮಾರ ಹಲಕುರ್ಕಿ, ಎಂ.ಎಸ್.ಗಡೆನ್ನವರ ಸೇರಿದಂತೆ ಪ್ರಮುಖರಿದ್ದರು.