ಪಿಎಂ ಸರ್ಕಾರಿ ಶಾಲೆಯಲ್ಲಿ ಸುರಕ್ಷಿತ ಬಚ್ಪನ್ ಅಭಿಯಾನದಡಿ ಕಾನೂನು ಅರಿವು ಕಾರ್ಯಕ್ರಮ ಯಶಸ್ವಿ
ಲೋಕದರ್ಶನ್ ವರದಿ
ಮುಂಡಗೋಡ 27 : ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ ಹಾಗೂ ಪಿಎಂ ಸರ್ಕಾರಿ ಶಾಲೆ ಮುಂಡಗೋಡ ಇವರ ಸಂಯುಕ್ತ ಸಹಯೋಗದಲ್ಲಿ ದಿನಾಂಕ 27-10-2026ರಂದು ಪಿಎಂ ಸರ್ಕಾರಿ ಶಾಲೆಯ ಆವರಣದಲ್ಲಿ ’ಸುರಕ್ಷಿತ ಬಚ್ಪನ್ ಅಭಿಯಾನ’ದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದೀಪ ಬೆಳಗಿಸಿ ಚಾಲನೆ ್ಘ ಮಕ್ಕಳ ಹಕ್ಕುಗಳ ರಕ್ಷಣೆ: ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶಿವರಾಜು ಎಚ್.ಎಸ್. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುರಕ್ಷಿತ ಬಚ್ಪನ್ ಅಭಿಯಾನದಡಿ ಕೈಗೊಳ್ಳಲಾಗುವ ಪ್ರಮುಖ ಚಟುವಟಿಕೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಅಲ್ಲದೆ, ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕ್ರಮಗಳು, ಪೋಷಕರು-ಶಿಕ್ಷಕರ ಜವಾಬ್ದಾರಿಗಳು ಹಾಗೂ ಸಹಾಯವಾಣಿಗಳ ಕುರಿತು ಜಾಗೃತಿ ಮೂಡಿಸಿದರು. ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ: ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತಾಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲರಾದ ಜ್ಯೋತಿ ಪಿ. ಪಾಟೀಲ್ ಅವರು ಮಾತನಾಡಿ, ಸುರಕ್ಷಿತ ಬಚ್ಪನ್ ಅಭಿಯಾನದ ಮುಖ್ಯ ಉದ್ದೇಶ,
ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಸಮಾಜದ ಪಾತ್ರದ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಕಾರ್ಯದರ್ಶಿಗಳಾದ ಎಸ್.ಕೆ. ಕೊಳ್ಳಾನವರು ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಗೀತಾ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ರಮೇಶ ಅಂಬಿಗೇರ್ ಹಾಗೂ ಶಾಲೆಯ ಸಹಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.