ಮುಂದಗೋಡ

ಮುಡಗೇರಿಯಲ್ಲಿ ರೈತ ಜಾಗೃತಿ ಕಾರ್ಯಕ್ರಮ

ಮುಡಗೇರಿಯಲ್ಲಿ ರೈತ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 


ಕಾರವಾರ 22:  ಖೇತ್ ಬಚಾವೋ ಅಭಿಯಾನ ಹಿ ರಬಿ 2026ರ ಅಂಗವಾಗಿ ಮುಡಗೇರಿ ಗ್ರಾಮದಲ್ಲಿ ಕೃಷಿ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.  

ಈ ಕಾರ್ಯಕ್ರಮದ ಅಂಗವಾಗಿ ಕೃಷಿ ವಿಜ್ಞಾನಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡವು ಮುಡಗೇರಿ ಗ್ರಾಮ ಪಂಚಾಯಿತಿ ಹಾಗೂ ಸುತ್ತಮುತ್ತಲಿನ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. 

ಪ್ರಧಾನ ವಿಜ್ಞಾನಿ ಡಾ. ಕಾಳಿದಾಸ್ ಸಿ. ರಸಗೊಬ್ಬರಗಳ ಸಮತೋಲಿತ ಮತ್ತು ವಿವೇಚನಾಯುಕ್ತ ಬಳಕೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ (ಕೆಸಿಸಿ) ಯೋಜನೆಯ ಕುರಿತು ರೈತರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.  

ಹಿರಿಯ ವಿಜ್ಞಾನಿ ಡಾ. ಮಹೇಶ್ ವಿ. ಕೃಷಿ ಸಾಲ ಸೌಲಭ್ಯಗಳು ಹಾಗೂ ವ್ಯಾಪಾರ ಒಪ್ಪಂದಗಳಿಂದ ರೈತರಿಗೆ ದೊರೆಯಬಹುದಾದ ಪ್ರಯೋಜನಗಳ ಕುರಿತು, ವಿಜ್ಞಾನಿ ಡಾ. ಕುರ್ವ ರಘು ರಾಮುಡು ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರು ಸುಲಭವಾಗಿ ಪಡೆಯಲು ಸಹಾಯಕವಾಗುವ ಮೊಬೈಲ್ ಅಪ್ಲಿಕೇಶನ್‌ನ ಪ್ರಾತ್ಯಕ್ಷಿಕೆಯನ್ನು ನೀಡಿದರು. 

 ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಹಾಗೂ ಸರ್ಕಾರಿ ಯೋಜನೆಗಳು ಮತ್ತು ಕೃಷಿ ಬೆಂಬಲ ಸೇವೆಗಳ ಕುರಿತು ರೈತರಲ್ಲಿ ಅರಿವು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಅ.22 ರಿಂದ ನ.30  ರವರೆಗೆ ನಡೆಯಲಿರುವ ಈ ರಾಷ್ಟ್ರವ್ಯಾಪ್ತಿ ಅಭಿಯಾನದ ಮೂಲಕ ದೇಶದಾದ್ಯಂತ ಸುಮಾರು ಒಂದು ಕೋಟಿ ರೈತರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ