ಶಿವಾಜಿ ಸರ್ಕಲ್ನಲ್ಲಿ ದುರ್ಗಾದೇವಿಗೆ ವಿಶೇಷ ಪೂಜೆ
ಲೋಕದರ್ಶನ ವರದಿ
ಮುಂಡಗೋಡ 21 : ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಶಿವಾಜಿ ಸರ್ಕಲ್ನಲ್ಲಿ ಮಂಗಳವಾರ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ದುರ್ಗಾದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ದೇವಿಯ ಭಾವಚಿತ್ರವನ್ನು ಪುಷ್ಪಾಲಂಕಾರದಿಂದ ಶೃಂಗರಿಸಿ, ಮಂಗಳಾರತಿ ಬೆಳಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಕಾರ್ಯಕರ್ತರು ಹಾಗೂ ಸ್ಥಳೀಯ ಭಕ್ತಾದಿಗಳು ಭಕ್ತಿಭಾವದಿಂದ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.