ಮುಂಡಗೋಡಿನಲ್ಲಿ ನವರಾತ್ರಿ ವೈಭವ: ಅ.11ರಿಂದ ‘ದುರ್ಗಾ ದೌಡ್’
ಲೋಕದರ್ಶನ ವರದಿ
ಮುಂಡಗೋಡ 07 : ಇಲ್ಲಿಯ ಬಸವಣ್ಣ ದೇವಸ್ಥಾನದಲ್ಲಿ ವಿವಿಧ ಹಿಂದೂ ಸಂಘಟನೆಗಳು ಹಾಗೂ ದುರ್ಗಾ ದೌಡ್ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ’ದುರ್ಗಾ ದೌಡ್’ ಕಾರ್ಯಕ್ರಮದ ಪ್ರಮುಖ ಪೂರ್ವಭಾವಿ ಸಭೆಯು ಮಂಗಳವಾರ ಯಶಸ್ವಿಯಾಗಿ ನೆರವೇರಿತು. ಅಕ್ಟೋಬರ್ 11 ರಿಂದ 19 ರವರೆಗೆ ದುರ್ಗಾ ದೌಡ್: ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, ನವರಾತ್ರಿ ಮಹೋತ್ಸವದ ಅಂಗವಾಗಿ ದಿನಾಂಕ: 11-10-2026 ರಿಂದ 19-10-2026 ರವರೆಗೆ ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದ 8.00 ಗಂಟೆಯವರೆಗೆ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ’ದುರ್ಗಾ ದೌಡ್’ ಮೆರವಣಿಗೆ ಸಂಚರಿಸಲಿದೆ.
ಅಕ್ಟೋಬರ್ 20 ರಂದು ಮಹಾ ದುರ್ಗಾ ಆರತಿ: ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ದಿನಾಂಕ: 20-10-2026 ರಂದು ಸಂಜೆ ಪಟ್ಟಣದ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದಲ್ಲಿ ಅದ್ಧೂರಿ ’ದುರ್ಗಾ ಆರತಿ’ ಕಾರ್ಯಕ್ರಮವನ್ನು ನೆರವೇರಿಸಲು ಸಭೆಯಲ್ಲಿ ಸರ್ವಸಮ್ಮತಿಯಿಂದ ನಿಶ್ಚಯಿಸಲಾಯಿತು. ಮಾತೃಶಕ್ತಿ ಹಾಗೂ ಕಾರ್ಯಕರ್ತರ ಉಪಸ್ಥಿತಿ: ಈ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ನೂರಾರು ತಾಯಂದಿರು, ದುರ್ಗಾ ದೌಡ್ ಸಮಿತಿಯ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.