ಮಹಲಿಂಗಪುರ

ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ: ಎಸ್‌.ಎಂ. ಮುಗೆಣ್ಣವರ

ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ: ಎಸ್‌.ಎಂ. ಮುಗೆಣ್ಣವರ

ಲೋಕದರ್ಶನ ವರದಿ 

           ಮಹಾಲಿಂಗಪುರ 05: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಬೆಳೆಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ​‍್ಿ) ಎಸ್‌.ಎಂ. ಮುಗೆಣ್ಣವರ ಹೇಳಿದರು. ಕೆಜಿಎಸ್ ಮಹಾಲಿಂಗಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2026-27 ಕಾರ್ಯಕ್ರಮವನ್ನು ಮಹಾಲಿಂಗಪುರದ ನೆಹರು ಹಿರಿಯ ಪ್ರಾಥಮಿಕ ಶಾಲೆ, ಬುಧ್ನಿ ಪಿಡಿ ಅವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

         ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಶಿಕ್ಷಣ ನೀಡಿದರೆ ಸಾಲದು. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಮಕ್ಕಳಲ್ಲಿನ ವಿಭಿನ್ನ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.  

           ಮುಖಂಡ ರಂಗನಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಅಪಾರ ಪ್ರತಿಭೆ ಮತ್ತು ಸೃಜನಶೀಲತೆ ಇದೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಮಕ್ಕಳ ಮೊದಲ ಗೆಲುವು. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ನಿರಂತರ ಪ್ರಯತ್ನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಡಿ.ಆರ್‌. ಕ್ಯಾಡಿ ಮಾತನಾಡಿ, ಪ್ರತಿಯೊಂದು ಮಗುವೂ ನಮ್ಮದೇ ಮಗು ಎಂಬ ಭಾವನೆಯಿಂದ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಶಿಕ್ಷಣ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡಬೇಕು.

            ಪಠ್ಯದ ಜೊತೆಗೆ ಕಲೆ, ಕೌಶಲ್ಯ ಮತ್ತು ಸೃಜನಶೀಲತೆಯ ಬೆಳವಣಿಗೆಗೂ ಅವಕಾಶ ನೀಡಬೇಕು ಎಂದರು. ಪತ್ರಕರ್ತರಾದ ಜಯರಾಮ ಶೆಟ್ಟಿ, ಬಿ.ಎನ್‌. ಅಸ್ಕಿ ಹಾಗೂ ವಿಠ್ಠಲ ಸಂಶಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿದರೆ ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳುವುದರ ಜೊತೆಗೆ ಭವಿಷ್ಯದ ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದರು.  

             ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ: ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಕಲಾ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಸೃಜನಶೀಲತೆ, ಕಲಾಸಕ್ತಿ ಹಾಗೂ ಸ್ಪರ್ಧಾತ್ಮಕ ಮನೋಭಾವಕ್ಕೆ ಕಲೋತ್ಸವ ಉತ್ತಮ ವೇದಿಕೆಯಾಯಿತು.

            ಈ ಸಂದರ್ಭದಲ್ಲಿ ಮಲ್ಲಪ್ಪ ಭಾವಿಕಟ್ಟಿ, ಪ್ರಕಾಶ ಉದಗಟ್ಟಿ, ಬಿ.ಕೆ. ಸಬರದ, ಎಂ.ಎಚ್‌. ಅಲ್ಲಾಸ, ಡಾ. ಎಸ್‌.ಆರ್‌. ಹಿದಕಲ್, ಜೆ.ಎಸ್‌. ಸನದಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಮಣ್ಣಯ್ಯನವರಮಠ, ಪತ್ರಕರ್ತರಾದ ಹಣಮಂತ ನಾವಿ, ರಾಜೇಂದ್ರ ನಾವಿ, ಕಸ್ತೂರಿ ಸಂಶಿ, ನೆಹರು ಶಾಲೆಯ ಮುಖ್ಯಶಿಕ್ಷಕ ಲೋಹಿತ ಸಂಶಿ ಸೇರಿದಂತೆ ಶಿಕ್ಷಕರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ