ಜನರ ಸಮಸ್ಯೆಗಳಿಗೆ ಉತ್ತರ ನೀಡಿ, ಭಿಕ್ಷಾಟನೆ ನಾಟಕ ನಿಲ್ಲಿಸಿ: ಜಿ.ಟಿ.ನಾಯ್ಕ್
ಕಾರವಾರ 07 : ರಸ್ತೆಯಲ್ಲಿ ಅಂಗಡಿಗಳ ಎದುರು ಭಿಕ್ಷೆ ಬೇಡುವ ನಾಟಕವಾಡುವುದನ್ನು ಬಿಟ್ಟು ಜಿಲ್ಲೆಯ ಜನರ ಸಮಸ್ಯೆಗಳಿಗೆ ಉತ್ತರ ನೀಡಿ ಎಂದು ಸಂಸದ ಕಾಗೇರಿಗೆ, ಕಾಂಗ್ರೆಸ್ನ ಜಿಲ್ಲಾ ಅಧ್ಯಕ್ಷರಾದ ಜಿ.ಟಿ.ನಾಯ್ಕ ತಿರುಗೇಟು ಕೊಟ್ಟಿದ್ದಾರೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಧ್ಯಮಗಳಿಗೆ ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಆರ್ಥಿಕವಾಗಿ ದುರ್ಬಲವಾಗಿಲ್ಲ.
ಬರಗಾಲದಂತಹ ಸಂಕಷ್ಟದ ನಡುವೆಯೂ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ. ಬರದಿಂದ ಸಂಕಷ್ಟಕ್ಕೊಳಗಾದ ರೈತರ ಖಾತೆಗಳಿಗೆ ತಲಾ 5,000 ರೂಪಾಯಿ ಪರಿಹಾರ ನೀಡಲಾಗಿದೆ.
ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಇಷ್ಟೆಲ್ಲಾ ಜನಪರ ಕಾರ್ಯಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರವನ್ನು ಟೀಕಿಸುವ ಮೊದಲು , ಬಿಜೆಪಿ ನಾಯಕರು ವಾಸ್ತವಾಂಶಗಳನ್ನು ಅರಿತುಕೊಳ್ಳಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ನಾಯ್ಕ ಹೇಳಿದ್ದಾರೆ. ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಯ ಬಗ್ಗೆ ನೀವು ಇಷ್ಟೊಂದು ಕಾಳಜಿ ತೋರುತ್ತಿದ್ದೀರಿ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಡೀಸೆಲ್ 56.71 ಇತ್ತು ಆದರೆ ನಿಮ್ಮ ಬಿಜೆಪಿ ಸರ್ಕಾರ ಈಗ ಪ್ರತಿ ಲೀಟರ್ ಗೆ 99.19 ರೂಪಾಯಿ ಏರಿಸಿದೆ.
ಅದೇ ರೀತಿ ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಪೆಟ್ರೋಲ್ 71.41 ಇದ್ದುದನ್ನ ಈಗ ನಿಮ್ಮದೇ ಬಿಜೆಪಿ ಸರ್ಕಾರ ರೂಪಾಯಿ 110 ಕ್ಕೆ ಏರಿಸಿದೆ. ಇದಕ್ಕೆ ನೀವು ತಕರಾರು ಮಾಡಿದ್ದೀರಾ?ಪೆಟ್ರೋಲ್ ಮತ್ತು ಡೀಸಲ್ ಹೆಚ್ಚಾಗಿರುವುದರಿಂದ ಸಾರಿಗೆ ಸಂಸ್ಥೆಗಳ ಮೇಲೆ, ಬಡ ರಿಕ್ಷಾ ಮತ್ತು ಕಾರುಗಳ ಮಾಲಕರಿಗೆ ಆಗುತ್ತಿರುವ ತೊಂದರೆಗಳಿಗೆ ಯಾವುಗಾದರೂ ಧ್ವನಿ ಎತ್ತಿದೀರಾ?ನಿಮ್ಮದೇ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ವಿಪರೀತಿವಾಗಿ ಏರಿಸಿರುವುದಿಂದಲೇ ಬಸ್ ಪ್ರಯಾಣ ದರವನ್ನು ಏರಿಸುವ ಸಂಧರ್ಭ ಬಂದಿರುವುದು ನಿಮಗೆ ಅರಿವಿಲ್ಲವೇ? ಎಂದಿದ್ದಾರೆ. ರೈ
ತರ ಹಾಲಿನ ಬೆಲೆಯನ್ನು ರೂಪಾಯಿ 7 ಕ್ಕೆ ಏರಿಸಿ ಆ ಹಣವನ್ನು ರೈತರಿಗೆ ಸಿಗುವಂತೆ ಮಾಡಿದ ಬಗ್ಗೆ ಪ್ರಶ್ನಿಸುವ ನೀವು , ಅದೇ ರೈತರು ಬಳಸುವ ರಾಸಾಯನಿಕ ಗೊಬ್ಬರ ದರವನ್ನು ಬಿಜೆಪಿ ಕೇಂದ್ರ ಸರ್ಕಾರ ಅವಧಿಯಲ್ಲಿ 2000 ಕ್ಕಿಂತಲೂ ಹೆಚ್ಚು ಮಾಡಿದೆ. ಅದನ್ನು ನಿಮ್ಮ ಸರ್ಕಾರವನ್ನು ಪ್ರಶ್ನೆ ಮಾಡಿದ್ದೀರಾ? ಪ್ರತಿಭಟನೆ ಮಾಡಿದ್ದೀರಾ? ದೇಶದ ಸಾಲವನ್ನು 225 ಲಕ್ಷ ಕೋಟಿ ಮಾಡಿ, ಭಾರತವನ್ನು ಅಕ್ಷರಶಃ ಭಿಕ್ಷೆ ಬೇಡುವ ಪರಿಸ್ಥಿತಿ ಮಾಡಿದ್ದು ಬಿಜೆಪಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಟೀಕಿಸಿದ್ದಾರೆ.