ಕಾರವಾರ

ಬಸ್ ದರ ಏರಿಕೆ ವಿರೋಧಿಸಿದ ಬಿಜೆಪಿ : ಭಿಕ್ಷೆ ಬೇಡಿ ಪ್ರತಿಭಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಬಸ್ ದರ ಏರಿಕೆ ವಿರೋಧಿಸಿದ ಬಿಜೆಪಿ : ಭಿಕ್ಷೆ ಬೇಡಿ  ಪ್ರತಿಭಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

 ಲೋಕದರ್ಶನ ವರದಿ 

        ಕಾರವಾರ 06 : ಬಸ್ ನಿಲ್ದಾಣ ಸುತ್ತಮುತ್ತ ಭಿಕ್ಷೆ ಬೇಡಿ, ಹಣ ಸಂಗ್ರಹಿಸಿ, ಅದನ್ನು ಸರ್ಕಾರಕ್ಕೆ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರು ಸಂಸದ ಕಾಗೇರಿ ನೇತೃತ್ವದಲ್ಲಿ ಶುಕ್ರವಾರ ಕಾರವಾರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಬಸ್ ಪ್ರಯಾಣ ದರ, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

         ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರವಾರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ಆರಂಭವಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭಿಕ್ಷೆ ಸಂಗ್ರಹಿಸುವ ಮೂಲಕ ಸರ್ಕಾರವನ್ನು ಅಣಿಕಿಸಿದರು. ಜನರ ಜೇಬಿಗೆ ಕತ್ತರಿ ಹಾಕುವ ಬೆಲೆ ಏರಿಕೆ ನೀತಿಯನ್ನು ಹಿಂಪಡೆಯುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದರು.

         ಪ್ರತಿಭಟನೆಯ ವೇಳೆ ಕಾರ್ಯಕರ್ತರನ್ನು ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರ್ಕಾರಕ್ಕೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಜನರಿಂದ ಭಿಕ್ಷೆ ಸಂಗ್ರಹಿಸಿ ನೀಡುತ್ತೇವೆ. ಆ ಹಣದಲ್ಲಾದರೂ ಸರ್ಕಾರ ಆಡಳಿತ ನಡೆಸಲಿ ಎಂದರು. ಒಂದೆಡೆ ಅಭಿವೃದ್ಧಿಯ ಮಾತುಗಳನ್ನಾಡುವ ಸರ್ಕಾರ ಮತ್ತೊಂದೆಡೆ ಜನರ ಮೇಲೆ ನಿರಂತರ ಬೆಲೆ ಏರಿಕೆಯ ಹೊರೆ ಹೇರುತ್ತಿದೆ. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಅವರ ಬದುಕನ್ನೇ ದುಬಾರಿಗೊಳಿಸುತ್ತಿದೆ ಎಂದು ಟೀಕಿಸಿದರು.                

ಸುದ್ದಿ ಓದಿ