ವೈದ್ಯರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ: ಓಪಿಡಿ ಬಂದ್ ಮಾಡುವುದಾಗಿ ವೈದ್ಯರ ಸಂಘದಿಂದ ಎಚ್ಚರಿಕೆ
ಲೋಕದರ್ಶನ ವರದಿ
ಕಾರವಾರ 31: ಶಿರಾಲಿ ಸರ್ಕಾರಿ ಆಸ್ಪಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದವರನ್ನು ನಾಳೆ ಒಳಗೆ ಬಂಧಿಸದಿದ್ದರೆ, ಸೋಮವಾರ ದಿಂದ ಓಪಿಡಿ ಬಂದ್ ಮಾಡುವುದಾಗಿ ಉತ್ತರ ಕನ್ನಡ ಸರ್ಕಾರಿ ವೈದ್ಯರ ಸಂಘ ಶನಿವಾರ ಎಚ್ಚರಿಕೆ ನೀಡಿತು. ಕಾರವಾರದಲ್ಲಿ ವೈದ್ಯಕೀಯ ಸಂಘದ ಪದಾಧಿಕಾರಿಗಳು ಶನಿವಾರ ಪತ್ರಿಕಾ ಭವನದಲ್ಲಿ ವೈದ್ಯರ ಸಂಘದ ಪದಾಧಿಕಾರಿಗಳ ಜೊತೆಗೆ ಡಿಎಚ್ ಇ ಸಂಜಯ್ ದೊಡ್ಮನಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವೈದ್ಯರ ಮೇಲೆ ಹಲ್ಲೆ ಮಾಡಿದ ಹತ್ತ ರಿಂದ ಹನ್ನೊಂದು ಜನರ ಗುಂಪು, ಅ.28 ರಂದು ಮಗು ಸಾವನ್ನಪ್ಪಿದ ನೆಪದಲ್ಲಿ ಆಸ್ಪತ್ರೆಗೆ ನುಗ್ಗಿ ಮಕ್ಕಳ ವೈದ್ಯ ಲೀಲಾಧರ ಹಾಗೂ ವೈದ್ಯ ರಾಜೇಶ್ ಮೇಲೆ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ಬೈದಿತ್ತು.
ಆಸ್ಪತ್ರೆಯ ಎಆರ್ ಓ ಶೃತಿ ನಾಯ್ಕರಿಗೆ ಸಹ ಬೈದು, ಘೆರಾವ್ ಹಾಕಿ ಭಯ ಹುಟ್ಟಿಸಿತು ಎಂದು ಶಿರಾಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಅಳಲು ತೋಡಿಕೊಂಡರು. ಈ ಘಟನೆಯ ನಂತರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಗುತ್ತಿಗೆ ಆಧಾರದ ವೈದ್ಯರು ರಾಜೀನಾಮೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ವೈದ್ಯರು ಬರಲು ಹಿಂದೇಟು ಹಾಕುವ ದಿನಗಳಲ್ಲಿ, ಹೀಗೆ ವಿಷಯ ತಿಳಿಯದೆ, ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ. ಇವರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಡಿಎಚ್ ಇ ಸಂಜಯ್ ದೊಡ್ಮನಿ ದೂರಿದರು. ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಇಲಾಖಾಧಿಕಾರಿಗಳು, ಭಟ್ಕಳ ಎ.ಸಿ, ಜಿಲ್ಲಾಧಿಕಾರಿಗಳು, ಜಿ.ಪಂ.ಸಿ.ಇ.ಓ, ಜಿಲ್ಲಾ ಎಸ್ಪಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶೃತಿ ಮಾತನಾಡಿ, ಹೆರಿಗೆ ನಂತರ ತಾಯಿ ಮಗುವಿಗೆ ಹಾಲು ಕುಡಿಸುವಾಗ ಮಗವಿನ ಶ್ವಾಸನಾಳಕ್ಕೆ ಹಾಲು ಹೊಕ್ಕ ಪರಿಣಾಮ ಮಗು ಮೃತಪಟ್ಟಿತ್ತು. ಮಕ್ಕಳ ವೈದ್ಯರು ಮಗುವನ್ನು ಬದುಕಿಸುವ ಪ್ರಯತ್ನ ವಿಫಲವಾಯಿತು. ಈ ವಿಷಯ ತಿಳಿದ ಬಾಣಂತಿ ಹೇಮಾ ನಾಯ್ಕ ಸಂಬಂಧಿಕರು ಆಸ್ಪತ್ರೆಗೆ ಬಂದು ವೈದ್ಯರ ಮೇಲೆ ಹಲ್ಲೆ ಮಾಡಿ, 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟರು. ಅಲ್ಲದೆ ಮಕ್ಕಳ ವೈದ್ಯ ಲೀಲಾಧರ ಹಾಗೂ ಡಾ.ರಾಜೇಶ್ ಮೇಲೆ ಹಲ್ಲೆ ಮಾಡಿ, ಭಯ ಹುಟ್ಟಿಸಿದರು ಎಂದು ಡಾ.ಶೃತಿ ವಿವರಿಸಿದರು. ಬಾಣಂತಿ ವಾರ್ಡ್ ನರ್ಸಗಳ ಮೇಲೆ ಸಹ ದಬ್ಬಾಳಿಕೆ ಮಾಡಲಾಗಿದೆ. ಆಸ್ಪತ್ರೆಗೆ ವೈದ್ಯರು ಬರದಂರಹ ಭಯದ ವಾತಾವರಣ ಇದೆ ಎಂದರು.
ಪೊಲೀಸರಿಗೆ ಸಿಸಿ ಟಿವಿ ಪೂಟೇಜಸ್ ನೀಡಲಾಗಿದೆ. ಲಿಖಿತ ದೂರು ಸಹ ನೀಡಲಾಗಿದೆ ಎಂದು ಸವಿತಾ ಕಾಮತ್ ಹೇಳಿದರು. ಡಿಸಿ ಹಾಗೂ ಎಸ್ಪಿಗೆ ಮನವಿ: ಪೊಲೀಸರ ಧೋರಣೆಯ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಹಾಗೂ ಎಸ್ಪಿ ದೀಪನ್ ಅವರಿಗೆ ಲಿಖಿತ ಮನವಿಯನ್ನು ಡಿಎಚ್ ಒ ನೇತೃತ್ವದಲ್ಲಿ ನೀಡಲಾಯಿತು ಎಂದು ನೊಂದ ವೈದ್ಯರು ತಿಳಿಸಿದರು. ಡಾ. ಸವಿತಾ ಕಾಮತ್, ನಟರಾಜ ಹಾಗೂ ವೈದ್ಯರ ಸಂಘದ ಪದಾಧಿಕಾರಿಗಳು ಇದ್ದರು.