ಕಾರವಾರದಲ್ಲಿ ವಾಲ್ಮೀಕಿ ಜಯಂತಿ: ವಾಲ್ಮೀಕಿ ಅವರ ಬದುಕು ಯುವಜನರಿಗೆ ಪ್ರೇರಣೆಯಾಗಲಿ: ಡಾ.ದೀಲೀಷ್ ಶಶಿ
ಕಾರವಾರ 26: ವಾಲ್ಮೀಕಿ ಮಹರ್ಷಿ ಬಡತನದಿಂದ ಜನಿಸಿದರೂ ಕೂಡ, ಶಿಕ್ಷಣ ಮತ್ತು ಜ್ಞಾನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಆದಿಕವಿ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ. ಅವರ ಬದುಕು ಯುವಜನರಿಗೆ ಪ್ರೇರಣೆಯಾಗಿದ್ದು ಅವರ ಸಂದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೀಲೀಷ್ ಶಶಿ ಕರೆ ನೀಡಿದರು. ಅವರು ಸೋಮವಾರ ಖಾಸಗಿ ಸಭಾ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ನಗರಸಭೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ಅವರು ತಮ್ಮ ಬದುಕಿನ ಅನುಭವಗಳಿಂದ ಪರಿವರ್ತನೆ ಹೊಂದಿ, ಧ್ಯಾನ ಮತ್ತು ಜ್ಞಾನಾರ್ಜನೆಯ ಮೂಲಕ ಆದಿಕವಿಯಾಗಿ ರೂಪುಗೊಂಡರು. ತಾವು ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗಾಗಿ ಧಾರೆ ಎರೆದರು. ವೈಯಕ್ತಿಕ ಬೆಳವಣಿಗೆಯ ಜತೆಗೆ ಸಮಾಜದ ಅಭಿವೃದ್ಧಿಗೂ ಪ್ರತಿಯೊಬ್ಬರೂ ಕೊಡುಗೆ ನೀಡಬೇಕೆಂಬುಹುದು ಅವರ ಜೀವನದ ಸಂದೇಶವಾಗಿದೆ. ಅವರು ರಚಿಸಿದ ರಾಮಾಯಣ ಮಹಾಕಾವ್ಯವು ಭಾರತೀಯ ಸಂಸ್ಕೃತಿಯ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ ಎಂದರು. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಪ್ರತಿಯೊಬ್ಬರಿಗೂ ದಾರಿ ದೀಪವಾಗಿದೆ. ರಾಮಾಯಣವು ಕೇವಲ ಕಥೆಯಲ್ಲ. ಅದು ಸಮಾನತೆ, ನ್ಯಾಯ, ಪ್ರೀತಿ, ಮಾನವೀಯತೆ ಹಾಗೂ ಉತ್ತಮ ಆಡಳಿತದ ಮೌಲ್ಯಗಳನ್ನು ಸಾರುತ್ತದೆ. ಸಮಾಜ ಹೇಗಿರಬೇಕು, ಆಡಳಿತ ವ್ಯವಸ್ಥೆ ಜನಪರವಾಗಿರಲು ಅಗತ್ಯವಾದ ಮೌಲ್ಯಗಳನ್ನು ತಿಳಿಸುತ್ತದೆ ಎಂದರು. ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ಶಿವಾಜಿ ವಿದ್ಯಾಮಂದಿರ ಶಾಲೆಯ ಶಿಕ್ಷಕ ಗಣೇಶ್ ಬಿಷ್ಟಪ್ಪನವರ್, ಮಹರ್ಷಿ ವಾಲ್ಮೀಕಿಯ ಮೂಲ ಹೆಸರು ರತ್ನಾಕರ, ಉತ್ತಮ ಕುಟುಂಬದಲ್ಲಿ ಜನಿಸಿದ್ದ ಅವರು ಕಳ್ಳನೂ ಅಲ್ಲ, ದರೋಡೆಕೋರನೂ ಅಲ್ಲ, ಅವರು ಆರಂಭದಲ್ಲಿ ದಾರಿ ತಪ್ಪಿದ್ದರು. ನಾರದ ಮುನಿಗಳ ಮಾರ್ಗದರ್ಶನದಿಂದ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಗೊಂಡರು.
ಅವರು ರಚಿಸಿದ ರಾಮಾಯಣ, ದಾರ್ಶನಿಕ ಮಹಾ ಕಾವ್ಯವಾಗಿದ್ದು, 24000 ಶ್ಲೋಕಗಳನ್ನು ಒಳಗೊಂಡಿದೆ. ರಾಮಾಯಣದಲ್ಲಿನ ಪ್ರತಿಯೊಂದು ಪಾತ್ರವು ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ಸಾರಲಿದ್ದು, ಇದರಲ್ಲಿನ ಸಂದೇಶಗಳು ಎಲ್ಲರಿಗೂ ಮಾದರಿಯಾಗಿದ್ದು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಸ್ವೀಕರಿಸಲಾಯಿತು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಜಿ. ಪಂ.ನ ಯೋಜನಾಧಿಕಾರಿ ಸೋಮಶೇಖರ್ , ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ, ಡಿಡಿಪಿಐ ಲತಾ ನಾಯ್ಕ, ಪ.ಜಾತಿ ಮತ್ತು ಪಂಗಡಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನಾಗರಾಜ ತಳವಾರ, ಕಿರಣ ನಾರಾಯಣ, ಮತ್ತಿತರರು ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು.