ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 2028ಕ್ಕೆ ಸ್ಪರ್ಧಿಸುವೆ : ಮಾಜಿ ಸಚಿವ ಆನಂದ ಅಸ್ನೋಟಿಕ
ಕಾರವಾರ 25: ಬರುವ 2028ರ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಲ್ಲಿ ಸ್ಪರ್ಧಿಸುವೆ. ಜೆಡಿಎಸ್ ಪಕ್ಷದ ಸಂಘಟನೆಯನ್ನು ಒಳಗೊಳಗೇ ಕಟ್ಟಿದ್ದೇನೆ. ಆ ವಿಶ್ವಾಸದಿಂದಲೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು. ಕಾರವಾರದ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರಯತ್ನಿಸುವ ಉದ್ದೇಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿಶ್ಚಯಿಸಿದ್ದೇನೆ ಎಂದರು.
ದಿವಂಗತ ವಸಂತ ಅಸ್ನೋಟಿಕರ್ ಹಾಗೂ ತಾಯಿ ದಿವಂಗತ ಶುಭಲತಾ ಅಸ್ನೋಟಿಕರ್ ಅವರ ಅಭಿಮಾನಿಗಳು ಇಂದಿಗೂ ಕಾರವಾರ ಜೊಯಿಡಾದಲ್ಲಿದ್ದಾರೆ. ಅವರ ಮೇಲಿನ ಜನರ ಪ್ರೀತಿ ಮತ್ತು ವಿಶ್ವಾಸ ರಾಜಕೀಯವಾಗಿ ನನಗೆ ಪ್ರೇರಣೆ ನೀಡುತ್ತಿದೆ. ಇದರೊಂದಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಶೀರ್ವಾದವೂ ನನಗಿದೆ ಎಂದರು. ಕಾರವಾರ ಕ್ಷೇತ್ರದ ಅಭಿವೃದ್ಧಿಯನ್ನು ಪ್ರಮುಖ ಗುರಿಯಾಗಿಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಲು ಉದ್ದೇಶಿಸಿದ್ದು, ಸಂಘಟನೆಯ ಬಲದೊಂದಿಗೆ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮುಂದುವರಿಸುವುದಾಗಿ ಅವರು ಹೇಳಿದರು.