ವಿಬಿ-ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿ ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಆಯುಕ್ತ ವೈ.ಎಸ್. ಪಾಟೀಲ
ಬೆಳಗಾವಿ, ಅ.31: ಗ್ರಾಮೀಣಾಭಿವೃದ್ಧಿ ಆಯುಕ್ತ ವೈ.ಎಸ್. ಪಾಟೀಲ ಅವರು ಶನಿವಾರ ಬೈಲಹೊಂಗಲ ತಾಲೂಕಿನ ಸಂಪಗಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರಗತಿಯಲ್ಲಿರುವ ತಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರೊಂದಿಗೆ ಸಂವಾದ ನಡೆಸಿದ ಅವರು, ಅವರ ಕುಂದುಕೊರತೆಗಳನ್ನು ಆಲಿಸಿದರು. ಕೂಲಿಕಾರರ ಎನ್‌ಎಂಎಂಎಸ್ (NMMS) ಹಾಜರಾತಿ ಹಾಗೂ ಗ್ರಾಮೀಣ ಉದ್ಯೋಗ ಖಾತರಿ ಜಾಬ್ ಕಾರ್ಡ್‌ಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದರು.
ಗ್ರಾಪಂ ಕಾರ್ಯಾಲಯಕ್ಕೆ ಭೇಟಿ
ಬಳಿಕ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಆಯುಕ್ತರು, ವಿಬಿ-ಜಿ ರಾಮ್ ಜಿ ಯೋಜನೆಯಡಿ ನಿರ್ವಹಿಸಲಾಗುವ 1ರಿಂದ 7ರವರೆಗಿನ ರಿಜಿಸ್ಟರ್‌ಗಳು ಹಾಗೂ ಕಾಮಗಾರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.
ಕಾಮಗಾರಿಯ ಅಳತೆ ಪುಸ್ತಕ, ಸಾಮಗ್ರಿಗಳ ಪಾವತಿ ಮತ್ತು ಕೂಲಿಕಾರರ ವೇತನ ಪಾವತಿ ಪ್ರಕ್ರಿಯೆ ಕುರಿತು ಮಾಹಿತಿ ಪಡೆದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ, ಸಹಾಯಕ ನಿರ್ದೇಶಕ (ಗ್ರಾಉ) ರಾಜೇಂದ್ರ ಮೊರಬದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಆನಿಗೋಳ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ರಿ, ಐಇಸಿ ಸಂಯೋಜಕ ಶಿವಮೂರ್ತಯ್ಯ ಹಿರೇಮಠ, ತಾಂತ್ರಿಕ ಸಹಾಯಕರು, ಗ್ರಾಪಂ ಸಿಬ್ಬಂದಿ ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.