ಬೆಳಗಾವಿ

ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆಗೆ ಆಗ್ರಹಿಸಿ ಸವದತ್ತಿ–ಧಾರವಾಡ ರಸ್ತೆ ತಡೆದು ರೈತರ ಪ್ರತಿಭಟನೆ

ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆಗೆ ಆಗ್ರಹಿಸಿ ಸವದತ್ತಿ–ಧಾರವಾಡ ರಸ್ತೆ ತಡೆದು ರೈತರ ಪ್ರತಿಭಟನೆ

ಸವದತ್ತಿ: ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ಲಾಭದಾಯಕ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ರೈತರ ಬೇಡಿಕೆಗಳಿಗೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಸ್ಪಂದಿಸಬೇಕು ಎಂದು ಆಗ್ರಹಿಸಿ ಸಾವಿರಾರು ರೈತರು ಶನಿವಾರ ಸವದತ್ತಿ–ಧಾರವಾಡ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಕರೀಕಟ್ಟಿ ಕ್ರಾಸ್ ಮತ್ತು ರಾಮದುರ್ಗ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿದ ರೈತರು ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಕರೀಕಟ್ಟಿ ಕ್ರಾಸ್ ಮತ್ತು ರಾಮದುರ್ಗ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಸುರೇಶ ಸಂಪಗಾವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಕಾನೂನಿನ ಚೌಕಟ್ಟಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ರೈತ ಮುಖಂಡ ಶಿವಾನಂದ ಸರದಾರ ಮಾತನಾಡಿ, ಸರ್ಕಾರ ಮತ್ತು ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲೀಸಾಬ ನೂಲಗಿ ಸೇರಿದಂತೆ ಇತರ ಮುಖಂಡರು ಮಾತನಾಡಿದರು.

ಪ್ರತಿಭಟನೆಯಿಂದ ಸವದತ್ತಿ–ಧಾರವಾಡ ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬಸ್ ನಿಲ್ದಾಣದ ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸವದತ್ತಿಗೆ ಆಗಮಿಸಿದ್ದ ರೇಣುಕಾ ಯಲ್ಲಮ್ಮ ದೇವಿಯ ಭಕ್ತರು ಹಾಗೂ ಸಾರ್ವಜನಿಕ ಪ್ರಯಾಣಿಕರು ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ತೀವ್ರ ತೊಂದರೆ ಅನುಭವಿಸಿದರು.

ನಂತರ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಈರಣ್ಣಾ ಹಳ್ಳದ, ದ್ಯಾಮನಗೌಡ ಪಾಟೀಲ್, ಮಕ್ತುಮಸಾಬ ಹಲಿಮನವರ, ಪುಂಡಲೀಕ ಕಬ್ಬೂರ, ಮೃತ್ಯುಂಜಯ ಪೂಜಾರ, ಉಮೇಶ್ ಕುರಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ