ಗದಗ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪೂರಕ" : ಶಿವರಾಜ ಶೀಮಿಕೇರಿ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪೂರಕ" : ಶಿವರಾಜ ಶೀಮಿಕೇರಿ

 

           ಲಕ್ಷ್ಮೇಶ್ವರ "  06: ಮಕ್ಕಳ ಪ್ರತಿಭೆ ಪ್ರಕಾಶಿಸಲು ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ. ಪ್ರತಿಭೆ ಎನ್ನುವುದು ಕೇವಲ ಪಠ್ಯಕ್ಕೆ ಸೀಮಿತವಾಗಿರುವುದಿಲ್ಲ. ಪಠ್ಯೇತರ ಚಟುವಟಿಕೆಗಳು ಕೂಡ ಪ್ರತಿಭೆಯ ಇನ್ನೊಂದು ಮುಖ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಇಲಾಖೆ ಸಮಾನ ಆದ್ಯತೆ ನೀಡುತ್ತಿದೆ" ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಜ ಶೀಮಿಕೇರಿ ಅಭಿಪ್ರಾಯಪಟ್ಟರು.

         ಅವರು ಲಕ್ಷ್ಮೇಶ್ವರದ ಬಿಸಿಎನ್ ಸ್ಪೆಕ್ಟ್ರಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಬಿಸಿಎನ್ ಸ್ಪೆಕ್ಟ್ರಂ ಶಾಲೆಯ ಆಡಳಿತಾಧಿಕಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ.

           ಇಂತಹ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತಮ ಅವಕಾಶ ಹಾಗೂ ಗುರುತಿಸುವಿಕೆ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಕೆ ಹವಾಲ್ದಾರ ಮಾತನಾಡಿ,ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ದಾಟಿಸುವ ಮಹಾನ್ ಉದ್ದೇಶ ದಿಂದ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ, ಕಲೆ ಸಂಸ್ಕೃತಿ ಮತ್ತು ಪರಂಪರೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.

         

ಸುದ್ದಿ ಓದಿ