‘ಎಮಿನೆಂಟ್ ಎಂಜಿನಿಯರ್’ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಲೋಕದರ್ಶನ ವರದಿ
ಮಹಾಲಿಂಗಪುರ 06 : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಲು ಕೇವಲ ಶೈಕ್ಷಣಿಕ ಪದವಿ ಇದ್ದರೆ ಸಾಲದು. ನಿರಂತರ ಪರಿಶ್ರಮ, ಶಿಸ್ತು, ಸಮಯಪ್ರಜ್ಞೆ, ವೃತ್ತಿನಿಷ್ಠೆ ಹಾಗೂ ಸಾಧಿಸುವ ಛಲ ಅತ್ಯಗತ್ಯ ಎಂದು ಪ್ರತಿಷ್ಠಿತ ‘ಎಮಿನೆಂಟ್ ಎಂಜಿನಿಯರ್’ ಪ್ರಶಸ್ತಿ ಪುರಸ್ಕೃತ ಹುಚ್ಛೇಶ ವಡ್ಡರ್ ಹೇಳಿದರು.
ಸಮೀಪದ ಧಪಳಾಪುರ ವಿದ್ಯಾವಿಹಾರ ಸಿಬಿಎಸ್ಇ ಶಾಲೆಯಲ್ಲಿ ನವೆಂಬರ್ 6ರಂದು ಶುಕ್ರವಾರ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಗುರಿ ನಿರ್ಧರಿಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಕಲಿಕೆ, ತಾಳ್ಮೆ ಮತ್ತು ಪ್ರಾಮಾಣಿಕ ಪ್ರಯತ್ನ ಅಗತ್ಯ. ಸೋಲುಗಳಿಂದ ನಿರಾಶರಾಗದೆ ಅವುಗಳನ್ನು ಅನುಭವದ ಪಾಠಗಳನ್ನಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಜ್ಞಾನ, ಅನುಭವ, ಪರಿಶ್ರಮ ಹಾಗೂ ಕಾರ್ಯದಕ್ಷತೆಯ ಮೂಲಕ ವಿಶಿಷ್ಟ ಛಾಪು ಮೂಡಿಸಿರುವ ಹುಚ್ಛೇಶ ವಡ್ಡರ್ ಅವರು ಪ್ರತಿಷ್ಠಿತ ‘ಎಮಿನೆಂಟ್ ಎಂಜಿನಿಯರ್’ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಶಾಲೆಯ ವತಿಯಿಂದ ಅವರನ್ನು ಗೌರವಿಸಲಾಯಿತು. ಅವರ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ಪತ್ನಿ ಶಶಿಕಲಾ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಾಧಕರ ಜೀವನಾನುಭವಗಳನ್ನು ತಿಳಿದುಕೊಳ್ಳಲು ಹಾಗೂ ಭವಿಷ್ಯದ ಗುರಿಗಳ ಕುರಿತು ಸ್ಪಷ್ಟತೆ ಪಡೆದುಕೊಳ್ಳಲು ಉತ್ತಮ ವೇದಿಕೆಯಾಯಿತು. ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕ ವಿವೇಕ ಧಪಳಾಪುರ, ನಿರ್ದೇಶಕಿ ಕವಿತಾ ಧಪಳಾಪುರ, ಪ್ರಾಂಶುಪಾಲ ಜಾಯ್ ಸೆಬಾಸ್ಟಿಯನ್, ಲಯನ್ಸ್ ಕ್ಲಬ್ ಸದಸ್ಯರು, ಪಾಲಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.