ನೂತನ ಕಿಮ್ಸ್ ನಿರ್ದೇಶಕ ಡಾ. ಅಮರೇಶ್ವರ ಎಂ. ಮಳಗಿ ಅವರಿಗೆ ಪತ್ರಕರ್ತರಿಂದ ಸನ್ಮಾನ
ಕೊಪ್ಪಳ 12 : ಕೊಪ್ಪಳದ ಕಿಮ್ಸ್ (ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ) ನೂತನ ನಿರ್ದೇಶಕರಾಗಿ (ಡೀನ್) ಅಧಿಕಾರ ಸ್ವೀಕರಿಸಿದ ಡಾ. ಅಮರೇಶ್ವರ ಎಂ. ಮಳಗಿ ಅವರನ್ನು ಪತ್ರಕರ್ತರ ತಂಡವು ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಪತ್ರಕರ್ತರಾದ ಜಿ.ಎಸ್. ಗೋನಾಳ, ಫಕೀರ್ಪ ಗೊಟೂರ, ಸಿದ್ದು ಹಿರೇಮಠ ಹಾಗೂ ಎಂ.ಎನ್. ಕುಂದಗೋಳ ಅವರು ನೂತನ ನಿರ್ದೇಶಕರನ್ನು ಗೌರವಿಸಿ, ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.
ಕೊಪ್ಪಳ ಜಿಲ್ಲೆಯ ಪ್ರಮುಖ ಸರ್ಕಾರಿ ವೈದ್ಯಕೀಯ ಸಂಸ್ಥೆಯಾಗಿರುವ ಕಿಮ್ಸ್ ಆಸ್ಪತ್ರೆಯು ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಆಗಮಿಸುತ್ತಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವಂತೆ ಸಂಸ್ಥೆಯ ಕಾರ್ಯನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ.
ಈ ಹಿನ್ನೆಲೆಯಲ್ಲಿ ನೂತನ ನಿರ್ದೇಶಕರಾದ ಡಾ. ಅಮರೇಶ್ವರ ಎಂ. ಮಳಗಿ ಅವರ ನೇತೃತ್ವದಲ್ಲಿ ಕಿಮ್ಸ್ ಸಂಸ್ಥೆಯ ವೈದ್ಯಕೀಯ ಸೇವೆಗಳು ಇನ್ನಷ್ಟು ಸುಧಾರಿಸಲಿ, ಬಡ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಲಿ, ಆಸ್ಪತ್ರೆಯಲ್ಲಿ ಸ್ವಚ್ಛತೆ, ಓಷಧೋಪಚಾರ, ವೈದ್ಯಕೀಯ ಸಿಬ್ಬಂದಿಯ ಸೇವೆ ಹಾಗೂ ಮೂಲಸೌಕರ್ಯಗಳು ಮತ್ತಷ್ಟು ಅಭಿವೃದ್ಧಿಯಾಗಲಿ ಎಂಬ ಆಶಯವನ್ನು ಪತ್ರಕರ್ತರು ವ್ಯಕ್ತಪಡಿಸಿದರು.ಅಲ್ಲದೆ, ಕಿಮ್ಸ್ ಆಸ್ಪತ್ರೆಯು ಜನಸ್ನೇಹಿ ಆಸ್ಪತ್ರೆಯಾಗಿ ರೂಪುಗೊಳ್ಳಲು ಆಡಳಿತ ಮಂಡಳಿ ವಿಶೇಷ ಗಮನಹರಿಸಬೇಕು.
ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ನೂತನ ನಿರ್ದೇಶಕರು ಉತ್ತಮ ಆಡಳಿತ ನೀಡಲಿ ಎಂದು ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿದ ಡಾ. ಅಮರೇಶ್ವರ ಎಂ. ಮಳಗಿ ಅವರು ಪತ್ರಕರ್ತರ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು.