ಕೊಪ್ಪಳ

ಭಕ್ತಿಯ ಬೆಳಕಿನಲ್ಲಿ ಕಾರ್ತಿಕೋತ್ಸವ: ಕುಕನೂರಿನಲ್ಲಿ 221ನೇ ಮಾಸಿಕ ಶಿವಾನುಭವ ಕಾರ್ಯಕ್ರಮ

ಭಕ್ತಿಯ ಬೆಳಕಿನಲ್ಲಿ ಕಾರ್ತಿಕೋತ್ಸವ: ಕುಕನೂರಿನಲ್ಲಿ 221ನೇ ಮಾಸಿಕ ಶಿವಾನುಭವ ಕಾರ್ಯಕ್ರಮ

 

            ಕುಕನೂರ 11:  ಉಳಿವಿ ಚೆನ್ನಬಸವೇಶ್ವರರ ಜಯಂತಿ ಆಚರಣೆ ಕೇವಲ ಉತ್ಸವಕ್ಕೆ ಸೀಮಿತವಾಗದೆ, ಅವರ ಆದರ್ಶ, ತತ್ವ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು. ಮಹಾತ್ಮರ ಜೀವನ ಮತ್ತು ಸಂದೇಶಗಳು ಸಮಾಜಕ್ಕೆ ಸದಾ ದಾರೀದೀಪವಾಗಿವೆ ಎಂದು ಕುಕನೂರಿನ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಪೂಜ್ಯ ಮನಿಪ್ರ ಡಾ. ಮಹಾದೇವ ಮಹಾಸ್ವಾಮಿಗಳು ಹೇಳಿದರು.

           ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಎಂ.ಎಸ್‌. ಚಾರಿಟೇಬಲ್ ಟ್ರಸ್ಟ್‌, ಕುಕನೂರ ಇವರ ಸಹಯೋಗದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆಯೋಜಿಸಿದ್ದ ದೀಪೋತ್ಸವ, ಉಳಿವಿ ಚೆನ್ನಬಸವೇಶ್ವರರ ಜಯಂತ್ಯುತ್ಸವ ಹಾಗೂ 221ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

              ಕಾರ್ತಿಕ ಮಾಸವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ದೀಪೋತ್ಸವವು ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನವೆಂಬ ಬೆಳಕನ್ನು ಬೆಳಗಿಸುವ ಪವಿತ್ರ ಸಂಕೇತವಾಗಿದೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಪ್ರೀತಿ, ಕರುಣೆ, ಧರ್ಮ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ದೀಪದ ಬೆಳಕಿನಂತೆ ಪ್ರತಿಯೊಬ್ಬರ ಬದುಕು ಇತರರಿಗೆ ಬೆಳಕಾಗಬೇಕು.

                ಇಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿ, ಭಾವೈಕ್ಯತೆ ಹಾಗೂ ಸಂಸ್ಕಾರಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ದೀಪೋತ್ಸವಕ್ಕೆ ಶ್ರೀಮಠಕ್ಕೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ದಿವಂಗತ ಬಸಪ್ಪ ಮುತ್ತಾಳ ಅವರ ಪುತ್ರಿ ಬಸಮ್ಮ ಬೇಲೇರಿ (ಯಲಬುರ್ಗಾ) ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

             ನಂತರ ಶ್ರೀಮಠದ ವತಿಯಿಂದ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯರಾದ ವೀರಯ್ಯ ಉಳ್ಳಾಗಡ್ಡಿಮಠ ಮಾತನಾಡಿ, ದಿವಂಗತ ಬಸಪ್ಪ ಮುತ್ತಾಳ ಅವರು ಶ್ರೀಮಠದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಶ್ರೀಮಠದ ಸೇವಾ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಂಡು ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

                 ಇಂದು ಶ್ರೀಮಠದ ವತಿಯಿಂದ ಅವರ ಪುತ್ರಿಯನ್ನು ಸನ್ಮಾನಿಸಿರುವುದು ಬಸಪ್ಪ ಮುತ್ತಾಳ ಅವರ ಸೇವೆ, ಭಕ್ತಿ ಹಾಗೂ ಕೊಡುಗೆಗೆ ಸಲ್ಲಿಸಿದ ಗೌರವವಾಗಿದೆ ಎಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ಮಲ್ಲಿಕಾರ್ಜುನ ನಾಗರಾಜ ಬೇಲೇರಿ, ಆನಂದ ಮಡಿವಾಳರ, ನೀಲಕಂಠಯ್ಯ ಕಾಶಿಮಠ, ವೀರಯ್ಯ ಉಳ್ಳಾಗಡ್ಡಿಮಠ, ಪ್ರಕಾಶ ಹತ್ತಿಕಟ್ಟಿಗಿ ಸೇರಿದಂತೆ ಶ್ರೀಮಠದ ಭಕ್ತರು,

           ಗಣ್ಯರು ಹಾಗೂ ಅಪಾರ ಸಂಖ್ಯೆಯ ಸದ್ಭಕ್ತರು ಉಪಸ್ಥಿತರಿದ್ದರು. ಕಾರ್ತಿಕ ಮಾಸದ ಪವಿತ್ರ ಸಂದರ್ಭದಲ್ಲಿ ನಡೆದ ದೀಪೋತ್ಸವ, ಜಯಂತ್ಯುತ್ಸವ ಹಾಗೂ ಶಿವಾನುಭವ ಕಾರ್ಯಕ್ರಮವು ಭಕ್ತರಲ್ಲಿ ಧಾರ್ಮಿಕ ಶ್ರದ್ಧೆ, ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಕಾರಗಳ ಮಹತ್ವವನ್ನು ಸಾರಿತು. 


ಸುದ್ದಿ ಓದಿ