ಅರಬಿಕ್ ವಿಶ್ವವಿದ್ಯಾಲಯದ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ
ಕೊಪ್ಪಳ, ಅ. 29: ದಕ್ಷಿಣ ಭಾರತದ ಪ್ರಸಿದ್ಧ ಐತಿಹಾಸಿಕ ಧಾರ್ಮಿಕ ವಿಶ್ವವಿದ್ಯಾಲಯವಾದ ತೆಲಂಗಾಣದ ಹೈದರಾಬಾದ್ನಲ್ಲಿರುವ ಜಾಮಿಯಾ ನಿಜಾಮಿಯಾದಲ್ಲಿ ಧಾರ್ಮಿಕ ಪಠ್ಯಕ್ರಮದ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೇ ಬರೆಯಲು ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷೆಯ ವ್ಯವಸ್ಥಾಪಕ ಮೇಲ್ವಿಚಾರಕರಾದ ಮೌಲಾನಾ ಹಾಫೀಜ್ ಅಲ್ಹಾಜ್ ಮಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ ತಸ್ಕೀನಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಜ್ರತ್ ಫಝೀಲತ್ ಜಂಗ್ ಬಹದ್ದೂರ್ ಆರಿಫ್ ಬಿಲ್ಲಾಹ್ ಇಮಾಮ್ ಅನ್ವಾರುಲ್ಲಾ ಫಾರೂಖಿ (ರ.ಹ) ರವರ 112ನೇ ಉರುಸ್ ಹಾಗೂ ಅವರು ಸ್ಥಾಪಿಸಿದ ಜಾಮಿಯಾ ನಿಜಾಮಿಯಾದ 156ನೇ ವಾರ್ಷಿಕೋತ್ಸವ ಕಾರ್ಯಕ್ರಮವು ನವೆಂಬರ್ 10ರ ಮಂಗಳವಾರದಂದು ವಿಜೃಂಭಣೆಯಿಂದ ಜರುಗಲಿದೆ. ಅಂದು ಸೂರ್ಯಾಸ್ತದ (ಮಗ್ರಿಬ್ ನಮಾಜ್) ನಂತರ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿವಿಧ ಪದವಿ/ಪ್ರಮಾಣಪತ್ರಗಳನ್ನು (ಸನದ್) ಪ್ರದಾನ ಮಾಡಲಾಗುವುದು.