ಯರಗಟ್ಟಿ ಸರ್ಕಾರಿ ಶಾಲೆಯಲ್ಲಿ ಅನಧಿಕೃತ ಪ್ರವೇಶ, ಕಳ್ಳತನ ತಡೆಗೆ ಕ್ರಮಕ್ಕೆ ಆಗ್ರಹ: ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರಿಂದ ಪೊಲೀಸರಿಗೆ ಮನವಿ
ಲೋಕದರ್ಶನ ವರದಿ
ಯರಗಟ್ಟಿ 29: ಸರ್ಕಾರಿ ಶಾಲಾ ಆವರಣದಲ್ಲಿ ಅನಧಿಕೃತವಾಗಿ ಅನಾಮಿಕ ವ್ಯಕ್ತಿಗಳು ಪ್ರವೇಶಿಸಿ ತೊಂದರೆ ಉಂಟುಮಾಡುತ್ತಿರುವ ಆ ವ್ಯಕ್ತಿಗಳನ್ನು ಹಾಗೂ ರಾತ್ರಿ ವೇಳೆ ಶಾಲೆಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಪದಾಧಿಕಾರಿಗಳು ಹಾಗೂ ಶಿಕ್ಷಕರು ಸಿಪಿಐ ಈರಯ್ಯ ಮಠಪತಿ ಅವರಿಗೆ ಮನವಿ ಸಲ್ಲಿಸಿದರು.
ಶಾಲೆಯ ಆವರಣವು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಾಗಿದ್ದು, ಅನಾಮಿಕ ವ್ಯಕ್ತಿಗಳ ಪ್ರವೇಶದಿಂದ ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಅಲ್ಲದೆ ರಾತ್ರಿ ವೇಳೆ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಕಳ್ಳತನದ ಘಟನೆಗಳಿಂದ ಶಾಲೆಯ ಆಸ್ತಿಪಾಸ್ತಿಗಳ ಸುರಕ್ಷತೆಗೂ ಸಮಸ್ಯೆ ಉಂಟಾಗಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಾಲೆಯ ಆಸ್ತಿಪಾಸ್ತಿಗಳ ರಕ್ಷಣೆ ದೃಷ್ಟಿಯಿಂದ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಶಾಲಾ ಆವರಣದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಕಡಿವಾಣ ಹಾಕಬೇಕು. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಿ, ಕಳ್ಳತನ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು
ಒತ್ತಾಯಿಸಿದರು.
ಸರ್ಕಾರಿ ಶಾಲೆಗಳು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣದ ಪ್ರಮುಖ ಕೇಂದ್ರಗಳಾಗಿದ್ದು, ಶಾಲಾ ಆವರಣದಲ್ಲಿ ಶಾಂತಿ, ಶಿಸ್ತು ಮತ್ತು ಸುರಕ್ಷಿತ ವಾತಾವರಣ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಮನವಿ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಲಕಪ್ಪ ಜಗದಾರ, ಶಾಲಾ ಮುಖ್ಯ ಶಿಕ್ಷಕ ಎ.ಎ.ಮಕ್ತುಮನವರ, ಸದಸ್ಯ ವಿಜಯ ಬಡಿಗೇರ, ದುಂಡಯ್ಯ ಹಿರೇಮಠ, ಮುದಕಪ್ಪ ತಡಸಲೂರ, ಫೀರೋಜ ಖಾದ್ರಿ, ಈರಣ್ಣ ಹೂಲ್ಲೂರ ಇದ್ದರು.